ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಪೋಲ್ಯಾಂಡ್ ಗೆ ತೆರಳಿದ್ದಾರೆ. 45 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಪೋಲ್ಯಾಂಡ್ ಗೆ ಭೇಟಿ ನೀಡಿದ್ದಾರೆ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.
ಪೋಲ್ಯಾಂಡ್ ಗೆ ಬಂದಿಳಿದ ಮೊದಲ ದಿನ ನರೇಂದ್ರ ಮೋದಿಯವರು ಅಲ್ಲಿನ ಪ್ರಮುಖ ಸ್ಮಾರಕಗಳಿಗೆ ಭೇಟಿ ನೀಡಿದ್ದು, ಬಳಿಕ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಸರಳ ನಡೆಯೊಂದು ಎಲ್ಲರ ಗಮನ ಸೆಳೆದಿದೆ.
ಈ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾರತೀಯ ಸಮುದಾಯದ ಓರ್ವ ವ್ಯಕ್ತಿ ತಮ್ಮ ಪುಟ್ಟ ಕಂದನನ್ನು ಕರೆದುಕೊಂಡು ಬಂದಿದ್ದು, ಮಗುವನ್ನು ನೋಡುತ್ತಿದ್ದಂತೆ ನರೇಂದ್ರ ಮೋದಿಯವರು ಕೈಚಾಚಿ ಎತ್ತಿಕೊಂಡಿದ್ದಾರೆ. ಈ ದೃಶ್ಯವನ್ನು ನೋಡಿದ ಪೋಲ್ಯಾಂಡ್ ನ ಭಾರತೀಯ ಸಮುದಾಯ ಸಂತಸಗೊಂಡಿದೆ. ಅಲ್ಲದೆ ಮೋದಿಯವರ ನಡೆಯನ್ನು ಅಲ್ಲಿದ್ದ ಓರ್ವ ವ್ಯಕ್ತಿ ಶ್ಲಾಘಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ.