ಅಪಘಾತದ ನಂತರ ಉರುಳಿಬಿದ್ದ ಕಾರಿನೊಳಗೆ ಸಿಲುಕಿರುವ ಚಾಲಕನನ್ನು ಗುಂಪೊಂದು ರಕ್ಷಿಸುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಟೆಕ್ಸಾಸ್ನ ಸ್ಯಾನ್ ಆಂಟೋನಿಯೊದಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ಪಲ್ಟಿಯಾದ ಕಾರಿನೊಳಗೆ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಲು ಅಪರಿಚಿತರ ಗುಂಪು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈವರೆಗೆ ವಿಡಿಯೋ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ರಕ್ಷಣೆಗೆ ಬಂದ ತಂಡ ಯಶಸ್ವಿಯಾಗಿ ಕಾರನ್ನು ಮೊದಲಿನ ಸ್ಥಿತಿಗೆ ತರುವುದರ ಜೊತೆಗೆ ಚಾಲಕನನ್ನು ರಕ್ಷಿಸುವಲ್ಲೂ ಸಫಲವಾಗುತ್ತದೆ. ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿಲು ನೆರವಾದರು. ಚಾಲಕನ ಆರೋಗ್ಯ ಈಗ ಸ್ಥಿರವಾಗಿದೆ.
ಚಾಲಕನನ್ನು ರಕ್ಷಿಸಿ ಆತನ ಜೀವ ಉಳಿಸಿದವರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. “ಟೀಮ್ವರ್ಕ್ ಡ್ರೀಮ್ ವರ್ಕ್’ ದೇವರು ಅವರೆಲ್ಲರನ್ನು ದಾರಾಳವಾಗಿ ಆಶೀರ್ವದಿಸಲಿ” ಎಂದು ನೆಟ್ಟಿಗರು ಹರಸಿದ್ದಾರೆ.
ಅಪಘಾತವಾದ ಸಮಯದಲ್ಲಿ ಕಾರನ್ನು ಪಲ್ಟಿ ಮಾಡುವುದರಿಂದ ಒಳಗಿದ್ದವರಿಗೆ ಹೆಚ್ಚು ಹಾನಿಯಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ರಕ್ಷಣೆಗೆ ಮೊದಲು ಸಹಾಯಕ್ಕಾಗಿ 911 ಗೆ ಕರೆ ಮಾಡಬೇಕೆಂದು ಅಭಿಪ್ರಾಯಪಟ್ಟರು.