ಎಲ್ಲಾ ಪ್ರೀತಿ, ಆಶೀರ್ವಾದಗಳು ಮತ್ತು ಸಂಪ್ರದಾಯಗಳಿಂದಾಗಿ ಮದುವೆಗಳು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಅದರಲ್ಲಿಯೂ ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ವಿಶೇಷವಾದ ಸ್ಥಾನವಿದ್ದು, ಹಲವು ಸಂಪ್ರದಾಯಗಳು ಇವುಗಳ ಬೆನ್ನಿಗೆ ಇವೆ.
ಮದುವೆ ಮನೆಗಳಲ್ಲಿ ಹಾಡು, ನೃತ್ಯ ಇವೆಲ್ಲಕ್ಕೂ ಈ ಹಿಂದೆ ಅವಕಾಶ ಇಲ್ಲದಿದ್ದರೂ ಈಗ ಅದೆಲ್ಲಾ ಕಾಮನ್ ಎನಿಸಿವೆ. ಇದಕ್ಕೆ ಸಿನಿಮಾ, ಧಾರಾವಾಹಿಗಳ ನಂಟೂ ಇದೆ. ಸಿನಿಮಾಗಳಲ್ಲಿ ತೋರಿಸುವಂತೆ ತಮ್ಮ ಮದುವೆಯನ್ನೂ ಆಚರಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹಲವು ಜೋಡಿ ತಲೆತಲಾಂತರಗಳಿಂದ ಬಂದಿರುವ ಸಂಪ್ರದಾಯಗಳನ್ನು ಬದಿಗಿಟ್ಟು ಹೊಸ ಯುಗದ ಸಂಪ್ರದಾಯಕ್ಕೆ ತಕ್ಕಂತೆ ಮದುವೆಯಾಗುತ್ತಿದ್ದಾರೆ.
ಮದುವೆ ಮನೆಗಳಲ್ಲಿನ ಕೆಲವು ರೋಚಕ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಬಹು ವರ್ಷ ಒಟ್ಟಿಗೆ ಇದ್ದು, ಮದುವೆಯಾಗುವ ಜೋಡಿಗಳು ಮದುವೆ ಮನೆಯಲ್ಲಿ ನೃತ್ಯ ಮಾಡುವುದು, ಹಾಡುವುದು ಎಲ್ಲವೂ ಈಗ ಸಾಮಾನ್ಯ. ಅದರ ಜೊತೆ, ಪರಸ್ಪರ ಮುತ್ತು ಕೊಟ್ಟುಕೊಳ್ಳುವ ಸಂಪ್ರದಾಯ ಹಿಂದೂಗಳಲ್ಲಿ ಇಲ್ಲವಾದರೂ ಸಿನಿಮಾ, ಧಾರಾವಾಹಿಗಳ ಪ್ರಭಾವದಿಂದ ಅವು ಮದುವೆ ಮನೆಗೆ ಬಂದಿವೆ.
ಇದೇನು ದೊಡ್ಡ ಅಪರಾಧವಲ್ಲದಿದ್ದರೂ ಪುರೋಹಿತರ ಎದುರು ಹೀಗೆ ಕಿಸ್ ಮಾಡಿಕೊಳ್ಳುವುದನ್ನು ಹಲವರು ಸಹಿಸುವುದಿಲ್ಲ. ಈ ವೈರಲ್ ವಿಡಿಯೋದಲ್ಲಿ ಕೂಡ ವರ, ವಧುವಿಗೆ ಮುತ್ತು ಕೊಟ್ಟಿರುವುದನ್ನು ನೋಡಬಹುದು. ಇದೇನು ದೊಡ್ಡ ವಿಷಯವೇ ಅಲ್ಲ ಎಂದು ಹಲವರು ಹೇಳಿದರೆ, ಕೆಲವು ಸಂಪ್ರದಾಯವಾದಿಗಳು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.