ಪಾರ್ಶ್ವವಾಯು ಪೀಡಿತರಾದ ರೋಗಿಯೊಬ್ಬರಿಗೆ ಫಿಸಿಯೋಥೆರಪಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲೆಂದು ನರ್ಸ್ ಒಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಭಾರೀ ಉತ್ಸಾಹದಿಂದ ರೋಗಿಯ ಆರೈಕೆ ಮಾಡುತ್ತಿರುವ ನರ್ಸ್, ಆತನಲ್ಲಿ ಮರುಚೈತನ್ಯ ತುಂಬಲು ಮಾಡುತ್ತಿರುವ ಪ್ರಯತ್ನ ನೆಟ್ಟಿಗರ ಗಮನ ಸೆಳೆದಿದೆ. ನರ್ಸ್‌ರಂತೆ ತಾನೂ ಒಂದು ಕೈಯಲ್ಲೇ ಕುಣಿಯಲು ನೋಡುತ್ತಿರುವ ರೋಗಿಯ ವಿಡಿಯೋ ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ರೋಗಿಯು ಒಮ್ಮೆ ಆರಾಮಾದ ಬಳಿಕ, ಪಾರ್ಶ್ವವಾಯುಪೀಡಿತವಾದ ಆತನ ಕೈಯನ್ನು ಹಿಡಿದ ನರ್ಸ್, ಆತನಿಗೆ ಚಲಿಸಲು ನೆರವಾಗಿದ್ದಾರೆ. ಹಿನ್ನೆಲೆಯಲ್ಲಿ ಸಂಗೀತ ಮೂಡಿಬರುತ್ತಿದ್ದು, ಅದಕ್ಕೆ ತಕ್ಕಂತೆ ಅಲ್ಲಾಡುತ್ತಿರುವ ರೋಗಿಯನ್ನು ಚಪ್ಪಾಳೆ ತಟ್ಟುವ ಮೂಲಕ ನರ್ಸ್ ಆತನನ್ನು ಪ್ರೋತ್ಸಾಹಿಸುತ್ತಿರುವುದನ್ನು ನೋಡಬಹುದಾಗಿದೆ.
ಒಂದು ನಿಮಿಷ 29 ಸೆಕೆಂಡ್‌ನ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ, “ರೋಗಿಗಳು ಚೇತರಿಸಿಕೊಂಡಾಗ ವೈದ್ಯರಿಗೆ ಧನ್ಯವಾದ ಹೇಳುತ್ತಾರೆ. ಆದರೆ ನರ್ಸ್‌ಗಳು ಮತ್ತು ವೈದ್ಯಕೀಯ ಸೇವೆಯ ಇತರೆ ಸಿಬ್ಬಂದಿ ಮಾಡುವ ಆರೈಕೆಗೆ ’ಧನ್ಯವಾದ’ ಎನ್ನುವುದು ತೀರಾ ಸಣ್ಣ ಪದವಾಗಿದೆ,” ಎಂದಿದ್ದಾರೆ.