
ಕೆಲವು ದಿನಗಳ ಹಿಂದೆ, ಯುಪಿಯಲ್ಲಿ ವರನೊಬ್ಬ ತನ್ನ ಮದುವೆಯನ್ನು ಮಾಡಲು ಪೊಲೀಸರ ಸಹಾಯವನ್ನು ಪಡೆಯಬೇಕಾಯಿತು. ಇನ್ನೊಂದೆಡೆ, ಯುಎಸ್ ನಲ್ಲಿ ಮದುವೆಯಾಗಬೇಕಿದ್ದ ವರ ಆಸ್ಪತ್ರೆಯಲ್ಲಿದ್ದರೆ, ವಧುವು ವರನ ಫೋಟೋ ಹಿಡಿದುಕೊಂಡು ಮದುವೆಯಾಗಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು.
ಇದೀಗ ಮತ್ತೊಂದು ಮದುವೆಯ ವಿಡಿಯೋ ವೈರಲ್ ಆಗಿದ್ದು, ವಧು-ವರನ ಪಾಡು ಕಂಡು ಅತಿಥಿಗಳು ಅಯ್ಯೋ ಎಂದರೆ, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಇಲ್ಲೊಂದೆಡೆ ಮಣ್ಣು ಅಗೆಯುವ ಜೆಸಿಬಿಯಲ್ಲಿ, ಸುಂದರವಾಗಿ ಅಲಂಕಾರಗೊಂಡ ವಧು-ವರನನ್ನು ಕೂರಿಸಲಾಗಿರುತ್ತದೆ. ಇದರಲ್ಲಿ ಕೂತ ಜೋಡಿಗಳು ಅತಿಥಿಗಳತ್ತ ಕೈ ಬೀಸುತ್ತಾ ಸಂಭ್ರಮಿಸಿದ್ದಾರೆ. ಆದರೆ, ಇವರ ಸಂಭ್ರಮ ಕೆಲವು ಸೆಕೆಂಡುಗಳವರೆಗಷ್ಟೇ ಇತ್ತು. ಯಾಕಂದ್ರೆ, ಮಣ್ಣು ಅಗೆಯುವ ಯಂತ್ರವು ಸ್ವಲ್ಪ ಬಾಗುತ್ತದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ನವಜೋಡಿ, ಕೆಳಗೆ ಇರಿಸಲಾಗಿದ್ದ ಮೇಜಿನ ಮೇಲೆ ಧೊಪ್ಪನೆ ಬಿದ್ದಿದ್ದಾರೆ.
ವಧು-ವರ ಬಿದ್ದ ರಭಸಕ್ಕೆ ಮೇಜು ತುಂಡಾಗಿದೆ. ಸ್ಥಳದಲ್ಲಿ ನೆರೆದಿದ್ದ ಅತಿಥಿಗಳು ಅವಾಕ್ಕಾಗಿದ್ದು, ಏನಾಯಿತೆಂದು ನೋಡುವಷ್ಟರಲ್ಲಿ ವಧು-ವರ ಕೆಳಗೆ ಬಿದ್ದು ಬಿಟ್ಟಿದ್ದಾರೆ. ಆಘಾತಗೊಂಡ ಅತಿಥಿಗಳು ತಲೆ ಮೇಲೆ ಕೈ ಹೊತ್ತು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕೆಲವು ನೆಟ್ಟಿಗರು ಘಟನೆಯನ್ನು ತಮಾಷೆಯಾಗಿ ನೋಡಿದ್ದರೆ, ಅನೇಕರು ಇಂತಹ ಅಪಾಯಕಾರಿ ಸಾಹಸವನ್ನು ಆಯೋಜಿಸಿದ್ದಕ್ಕಾಗಿ ವಿವಾಹದ ಆಯೋಜಕರನ್ನು ಟೀಕಿಸಿದ್ದಾರೆ.