
ಇಂಟರ್ನೆಟ್ ಎಲ್ಲಾ ರೀತಿಯ ತಮಾಷೆ, ಮೋಜು ಮತ್ತು ಆಸಕ್ತಿದಾಯಕ ವಿಡಿಯೋಗಳ ಉಗ್ರಾಣವಾಗಿದೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೌದು, ಸಾಮಾನ್ಯವಾಗಿ ಸಾಕುನಾಯಿಗಳ, ಬೆಕ್ಕುಗಳ ಹುಟ್ಟುಹಬ್ಬವನ್ನು ಆಚರಿಸೋದನ್ನು ನೀವು ನೋಡಿರ್ತೀರಾ. ಆದರೆ, ಎಂದಾದ್ರು ಕೋಳಿಯ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದನ್ನು ನೋಡಿದ್ದೀರಾ..?
ಹೌದು, ಇದೀಗ ವೈರಲ್ ಆಗಿರುವ ವಿಡಿಯೋ ಕೋಳಿಯ ಹುಟ್ಟುಹಬ್ಬ ಆಚರಣೆಯದ್ದಾಗಿದೆ. ಸಾಕು ಕೋಳಿಯ ಹುಟ್ಟುಹಬ್ಬವನ್ನು ಕುಟುಂಬವೊಂದು ಸಂಭ್ರಮದಿಂದ ಆಚರಿಸಿದೆ. ಕೋಳಿಯ ಎರಡನೇ ವರ್ಷದ ಹುಟ್ಟುಹಬ್ಬದಂದು, ಕುಟುಂಬವು ಅದ್ಧೂರಿ ಮತ್ತು ವಿಶಿಷ್ಠ ರೀತಿಯಲ್ಲಿ ಆಚರಿಸಿದೆ. ಮಕ್ಕಳ ಹುಟ್ಟಹಬ್ಬಕ್ಕೆ ನೆಂಟರಿಷ್ಟರನ್ನು ಆಹ್ವಾನಿಸುವಂತೆ, ಕೋಳಿಯ ಹುಟ್ಟುಹಬ್ಬಕ್ಕೂ ಅತಿಥಿಗಳು ಪಾಲ್ಗೊಂಡಿದ್ದರು. ಕೇಕ್ ಕಟ್ ಮಾಡಿ ಅತ್ಯಂತ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಬಲೂನ್‌ಗಳು, ಲ್ಯಾಂಟರ್ನ್‌ಗಳು, ಹ್ಯಾಪಿ ಬರ್ತ್‌ಡೇ ಎಂದು ಬರೆದಿರುವ ಬ್ಯಾನರ್ ಸೇರಿದಂತೆ ಸುಂದರವಾಗಿ ಕೋಣೆಯ ಮೇಜಿನ ಮೇಲೆ ದೊಡ್ಡ ಕೇಕ್ ಇಡಲಾಗಿದೆ. ಅಕ್ಕ-ಪಕ್ಕ ಇಬ್ಬರು ಮಹಿಳೆಯರು ಕೂತಿದ್ದರೆ, ಕೋಳಿ ಹಿಡಿದುಕೊಂಡಿರುವ ಯುವತಿ ಮಧ್ಯದಲ್ಲಿ ಕುಳಿತಿದ್ದಾಳೆ. ಜನ್ಮದಿನದ ಪ್ರಯುಕ್ತ ಮಹಿಳೆ ಕೇಕ್ ಕಟ್ ಮಾಡುತ್ತಿದ್ದಂತೆ, ನೆರೆದಿದ್ದ ಎಲ್ಲರೂ ಹ್ಯಾಪಿ ಬರ್ತ್ ಡೇ ಟು ಕೋಳಿ ಎಂದು ಶುಭಾಶಯ ಕೋರುವ ಮೂಲಕ ಹಾಡಿದ್ದಾರೆ. ಕೇಕ್‌ನ ಸ್ವಲ್ಪ ಭಾಗವನ್ನು ಕೋಳಿಗೂ ನೀಡಲಾಯ್ತು.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ರೆ, ಇನ್ನೂ ಕೆಲವರು ಸಾಕು ಕೋಳಿಯ ಹುಟ್ಟುಹಬ್ಬ ಆಚರಿಸಿದ್ದನ್ನು ಇಷ್ಟಪಟ್ಟಿದ್ದಾರೆ.