ಮನುಷ್ಯ ಮತ್ತು ಕೆಲವು ಪ್ರಾಣಿಗಳ ಅನುಬಂಧಕ್ಕೆ ಬೆಲೆ ಕಟ್ಟಲಾಗದು. ಅದರಲ್ಲಿ ಒಂದು ಕೋತಿ. ಇಂದು ವೈರಲ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತನಗೆ ದಿನವೂ ಆಹಾರ ನೀಡುತ್ತಿದ್ದ ವ್ಯಕ್ತಿ ಮೃತಪಟ್ಟಾಗ ಮಂಗವೊಂದು ಆತನ ಅಂತ್ಯಸಂಸ್ಕಾರಕ್ಕೆ ಬಂದು ಕಣ್ಣೀರಿಡುತ್ತಿರುವ ದೃಶ್ಯ ಇದಾಗಿದೆ.
ಪೂರ್ವ ಶ್ರೀಲಂಕಾದ ಬ್ಯಾಟಿಕಲೋವಾದ ವಿಡಿಯೋ ಇದಾಗಿದೆ. ವ್ಯಕ್ತಿಗೆ ಅಂತಿಮ ನಮನ ಸಲ್ಲಿಸುವ ಹತ್ತಾರು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಶೋಕಿಸುತ್ತಿದ್ದ ನಡುವೆ, ಕೋತಿ ಅವನ ಪಾರ್ಥಿವ ಶರೀರದ ಬಳಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಂತ್ಯಕ್ರಿಯೆಯಲ್ಲಿದ್ದ ಜನರು ಕೋತಿಯನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದರೂ ಮಂಗ ಅಲ್ಲಿಂದ ಕದಲಲಿಲ್ಲ. ಮೃತ ವ್ಯಕ್ತಿಯ ಮುಖದ ಬಳಿ ಕುಳಿತಿರುವ ಮಂಗ ಆತ ಬದುಕಿದ್ದಾನೆಯೇ ಎಂದು ನೋಡುತ್ತಿದೆ ಮತ್ತು ಸತ್ತ ವ್ಯಕ್ತಿಯನ್ನು ಎಚ್ಚರಗೊಳಿಸಲು ಕೋತಿ ಪ್ರೀತಿಯಿಂದ ಅವನನ್ನು ತಳ್ಳುವ ದೃಶ್ಯ ಎಂಥವರಿಗೂ ಕಣ್ಣೀರು ತರಿಸುವಂತಿದೆ.