
ಹೌದು, ಗಾಯಗೊಂಡ ಕೋತಿಗೆ ತುರ್ತು ಸಿಪಿಆರ್ ನೀಡುವ ಮೂಲಕ ವ್ಯಕ್ತಿಯೊಬ್ಬರು ರಕ್ಷಿಸಲು ಪ್ರಯತ್ನಿಸುತ್ತಿರುವುದರ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಡಿಸೆಂಬರ್ 10 ರಂದು ತಮಿಳುನಾಡಿನ ಪೆರಂಬಲೂರಿನಲ್ಲಿ ಈ ಘಟನೆ ನಡೆದಿದೆ. ಬೀದಿನಾಯಿಗಳಿಂದ ಕಚ್ಚಲ್ಪಟ್ಟ ಕೋತಿ ಗಂಭೀರ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.
ಘಟನೆಯ ವಿಷಯ ತಿಳಿದ ಪೆರಂಬಲೂರಿನ ಕುನ್ನಂ ತಾಲೂಕಿನ ಕಾರು ಚಾಲಕ ಎಂ ಪ್ರಭು, ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೋತಿಯನ್ನು ಕಂಡ ಅವರು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
ಆದರೆ, ಕೋತಿಯು ತನ್ನ ನಾಡಿಮಿಡಿತವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಅವರು ಅದಕ್ಕೆ ಸಿಪಿಆರ್ ನೀಡಲು ನಿರ್ಧರಿಸಿದ್ದಾರೆ. ಕೂಡಲೇ ಮಂಗದ ಹೃದಯವನ್ನು ಪಂಪ್ ಮಾಡಲು ಪ್ರಾರಂಭಿಸಿದ್ದಾರೆ. ತನ್ನ ಕೈಯಿಂದ ಆದಷ್ಟು ಒತ್ತಿದ್ದಾರೆ.
ನಂತರ ತನ್ನ ಬಾಯಿಯಿಂದ ಕೋತಿಯ ಬಾಯಿಯನ್ನು ಊದುವುದರ ಮುಖಾಂತರ ಉಸಿರಾಡುವಂತೆ ಮಾಡಿದ್ದಾರೆ. ಮಂಗ ಮತ್ತೆ ಉಸಿರಾಡುತ್ತಿರುವುದನ್ನು ನೋಡಿದಾಗ ಅವರ ಪ್ರಯತ್ನವು ಅಂತಿಮವಾಗಿ ಫಲ ನೀಡಿದೆ. ನಂತರ ಅವರು ಕೋತಿಯನ್ನು ಹತ್ತಿರದ ಸರ್ಕಾರಿ ಪಶುವೈದ್ಯರ ಬಳಿಗೆ ಕರೆದೊಯ್ದಿದ್ದು, ಅಲ್ಲಿ ಕೋತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಪ್ರಭುವಿನ ಮಾನವೀಯತೆಗೆ ನೆಟ್ಟಿಗರು ಮನಸೋತಿದ್ದಾರೆ.