ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ.
ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ವ್ಹಾ ಎಂದು ಉದ್ಘರಿಸುವಂತೆ ಮಾಡಿದೆ.
ಪಂಜಾಬಿ ಟಚ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಂಗಡಿಯವನಂತೆ ಕಾಣುವ ವ್ಯಕ್ತಿಯೊಬ್ಬರು ಮೇಜಿನ ಮೇಲೆ ನಿಂತು ಕಪ್ಪು ಸೀರೆಯಲ್ಲಿ ಅಚ್ಚುಕಟ್ಟಾಗಿ ನೆರಿಗೆ ಹಾಕುತ್ತಿರುವುದನ್ನ ನೋಡಬಹುದು.
ಸೀರೆಯ ನೆರಿಗೆಗಳನ್ನು ತನ್ನ ಸೊಂಟಕ್ಕೆ ಸಿಲುಕಿಸಿಕೊಂಡು ನಂತರ ಸೆರಗನ್ನು ಹಾಕಿಕೊಂಡು ನಿಲ್ಲುತ್ತಾರೆ. ಮಹಿಳೆಯರು ಕೂಡ ನೆರಿಗೆ ಹಾಕಲು ಒದ್ದಾಡುತ್ತಾರೆ. ಆದರೆ ಆ ವ್ಯಕ್ತಿ ಕ್ಷಣಮಾತ್ರದಲ್ಲಿ ನೀಟಾಗಿ ನೆರಿಗೆ ಹಾಕಿ ಸೀರೆ ಉಡುವ ಕ್ರಮ ನೆಟ್ಟಿಗರನ್ನು ಹುಬ್ಬೇರಿಸಿದೆ.
ಈ ವೀಡಿಯೊಗೆ “ಬ್ರೋ ಬಹುತೇಕ ಅದನ್ನು ಖರೀದಿಸಲು ಬಯಸುವಂತೆ ಮಾಡಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಮೆಚ್ಚಿಕೊಂಡ ಹಲವರು ವ್ಯಕ್ತಿಯ ಕೌಶಲ್ಯಕ್ಕೆ ಬೆರಗಾಗಿದ್ದಾರೆ.