![](https://kannadadunia.com/wp-content/uploads/2021/11/Dog-Abuser.jpg)
ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ನೋಡಿದ ಹಸುವೊಂದು ಬಂದು ಆತನಿಗೆ ತಿವಿದಿರುವ ವಿಡಿಯೋ ವೈರಲ್ ಆಗಿತ್ತು. ಭಾರತೀಯ ಅರಣ್ಯ ಸೇವೆಯ ಭುವನೇಶ್ವರ ಮೂಲದ ಸುಸಂತ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ವ್ಯಕ್ತಿಯೊಬ್ಬ ನಾಯಿಯನ್ನು ಕುತ್ತಿಗೆಯಿಂದ ಎತ್ತಿದ್ದಾನೆ, ಅದೆಷ್ಟೇ ಕಿರುಚಿಕೊಂಡ್ರೂ ಕೂಡ ಆತ ದಯೆ ತೋರಿಲ್ಲ. ಇದನ್ನು ಅಲ್ಲಿದ್ದ ಜನರು ಕೂಡ ತಡೆಯಲು ಬಂದಿಲ್ಲ. ಆದರೆ, ಹಸುವೊಂದು ಬಂದು ಆತನನ್ನು ನೆಲಕ್ಕೆ ಕೆಡವಿ ಚೆನ್ನಾಗಿ ತಿವಿದಿದೆ.
ಈ ವಿಡಿಯೋ ವೈರಲ್ ಆದ ನಂತರ, ಆ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ ಪೆಟಾ ಇಂಡಿಯಾ ಬಹುಮಾನ ಘೋಷಿಸಿದೆ. ಪ್ರಾಣಿ ಹಿಂಸೆ ಪ್ರಕರಣದಲ್ಲಿ ಆತನ ಬಂಧನ ಅಥವಾ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈತನ ಬಗ್ಗೆ ಮಾಹಿತಿ ಹೊಂದಿರುವ ಯಾರಾದರೂ (0) 9820122602 ಅಥವಾ ಇ-ಮೇಲ್ Info@petaindia.org ಗೆ ತುರ್ತು ಸಹಾಯವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ. ಕೋರಿಕೆಯ ಮೇರೆಗೆ ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಪೆಟಾ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ಯಾರಾದರೂ ಪ್ರಾಣಿಗಳನ್ನು ನಿಂದಿಸುತ್ತಿದ್ದರೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಪೆಟಾ ತಿಳಿಸಿದೆ. ಅಲ್ಲದೆ ಇಂತಹ ಕೃತ್ಯಗಳು ಸಂಭವಿಸುತ್ತಿರುವಾಗ ಮೂಕ ಪ್ರೇಕ್ಷಕರಂತೆ ನಿಲ್ಲುವ ಬದಲು ಹಸುವನ್ನು ನೋಡಿ ಕಲಿಯಬೇಕಿದೆ ಎಂದು ಹೇಳಿದೆ.