ಮಕ್ಕಳು ಗೋಡೆಗಳು, ಮೇಜುಗಳು ಮತ್ತು ಕ್ಲೀನ್ ಮೇಲ್ಮೈ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಗೀಚುವುದು ಸಾಮಾನ್ಯವಾಗಿದೆ. ಅದು ಅವರಿಗೆ ಡ್ರಾಯಿಂಗ್ ಬೋರ್ಡ್ನಂತೆ ಕಂಡರೆ ಅದರಿಂದ ತೊಂದರೆ ಅನುಭವಿಸುವವರ ಪಾಡಂತೂ ಕೇಳುವುದೇ ಬೇಡ. ಅಂಥದ್ದೇ ಒಂದು ಮಗುವಿನ ತುಂಟಾಟದ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುವಂತಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗು ತನ್ನ ತಾಯಿಯ ಬಳಿ ಇರುವ ಹನ್ನೆರಡು ಲಿಪ್ಸ್ಟಿಕ್ಗಳನ್ನು ತಂದು ಅದರಿಂದ ಕಾರಿನ ತುಂಬೆಲ್ಲಾ ಗೀಚಿರುವ ದೃಶ್ಯವನ್ನು ಕಾಣಬಹುದು. ಲಿಪ್ಸ್ಟಿಕ್ ಹಾಳು ಮಾಡಿದ್ದು ಮಾತ್ರವಲ್ಲದೇ, ಕಾರಿನ ಮೇಲೆ ಬೇಕಾಬಿಟ್ಟೆಯಾಗಿ ಗೀಚಿದ್ದಾನೆ.
ಇಷ್ಟೇ ಆಗಿದ್ದರೆ ಇದು ಇಷ್ಟೆಲ್ಲಾ ವೈರಲ್ ಆಗುತ್ತಿರಲಿಲ್ಲವೇನೋ. ಆದರೆ ಬಾಲಕ ತುಂಬಾ ಚಾಣಾಕ್ಷ. ಅಮ್ಮನ ಲಿಪ್ಸ್ಟಿಕ್ ಅನ್ನು ತನ್ನ ಪುಟ್ಟ ಸೈಕಲ್ನಲ್ಲಿ ಹೊತ್ತುಕೊಂಡು ಬಂದು ಅಲ್ಲಿರುವ ಕಾರಿನ ಮೇಲೆ ಗೀಚಿದ್ದಾನೆ. ಅಷ್ಟಕ್ಕೂ ಈತ ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗದೇ ಗೀಚಿದ್ದಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅದೇನೆಂದರೆ, ಹೀಗೆ ಗೀಚಿದ ನಂತರ ತಾನೇ ಈ ಕೆಲಸ ಮಾಡಿದ್ದು ಎಂದು ಗೊತ್ತಾಗಬಾರದು ಎಂದು ಆತ ಪುಟ್ಟ ಸೈಕಲ್ ಏರಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಪುಟ್ಟ ಬಾಲಕನ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಚಿಕ್ಕಮಕ್ಕಳು ಏನು ಮಾಡಿದರೂ ಚೆಂದ ಎಂದು ಹಲವರು ಕಮೆಂಟ್ ಮಾಡಿದರೆ, ಅಷ್ಟೂ ಲಿಪ್ಸ್ಟಿಕ್ ಹಾಳಾದಕ್ಕೆ ತಾಯಿ ಪಾಪ ಅವನಿಗೆ ಏನು ಮಾಡಿದಳೋ ಗೊತ್ತಿಲ್ಲ ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು ಈ ಕಾರಿನ ಮಾಲೀಕನ ಕಥೆ ಅಷ್ಟೇ ಎಂದಿದ್ದಾರೆ.