
ವೈರಲ್ ವಿಡಿಯೋವನ್ನು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಶಾಲಾ ಹಾಸ್ಟೆಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಹಾಸ್ಟೆಲ್‌ನಲ್ಲಿ ತನ್ನ ತಾಯಿಯ ನೆನಪಿನಲ್ಲಿ ಅಳುತ್ತಿರುವ ಸಹಪಾಠಿಯನ್ನು ಅಳಬೇಡ ಎಂದು ಪುಟ್ಟ ಹುಡುಗಿ ಸಮಾಧಾನ ಮಾಡಿದ್ದಾಳೆ.
ಚಿಕ್ಕ ಹುಡುಗಿಯೊಬ್ಬಳು ತನ್ನ ಸಹಪಾಠಿಯನ್ನು ಅಳಬೇಡ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವಳು ಬಾಲಕನ ಕೈಯನ್ನು ಹಿಡಿದು ಅಳಬೇಡ ನೀನು ಎಂದು ಸಾಂತ್ವಾನ ಮಾಡಿದ್ದಾಳೆ. ನಂತರ ಅವಳು, ‘ನೀನು ನಿನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀಯಾ?’ ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಹುಡುಗ ಕಣ್ಣೀರಿನ ಮೂಲಕ ಹೌದು ಎಂದು ತಲೆಯಾಡಿಸಿದ್ದಾನೆ.
ಈ ವೇಳೆ ಏಪ್ರಿಲ್‌ನಲ್ಲಿ ತಮ್ಮ ಕುಟುಂಬಗಳನ್ನು ಭೇಟಿ ಮಾಡುತ್ತೇವೆ ಎಂದು ಹುಡುಗಿ ಅವನಿಗೆ ನೆನಪಿಸುತ್ತಾಳೆ. ನಾವು ಏಪ್ರಿಲ್‌ನಲ್ಲಿ ಹೋಗುತ್ತೇವೆ. ಹೀಗೆ ಅಳಬೇಡಿ ಆಯ್ತಾ, ಎಂದು ಹೇಳುತ್ತಾ ಬಾಲಕನ ತಲೆಯನ್ನು ಪುಟ್ಟ ಹುಡುಗಿ ಸವರಿದ್ದಾಳೆ.
ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಣ್ಣೀರು ಹಾಕಿದ್ದಾರೆ.