ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್ ಆಗಿರುವ ವಿಡಿಯೋ ಇದು.
ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ ಸಿಪಿಆರ್ ಅಥವಾ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ನೀಡುವ ಮೂಲಕ ಜೀವ ಉಳಿಸಿದ ದೃಶ್ಯ ಈ ವಿಡಿಯೋದಲ್ಲಿದೆ.
ರಸ್ತೆ ಮೇಲಿದ್ದ ನಾಯಿ ಕುಸಿದು ಬಿದ್ದು, ನಿಸ್ತೇಜವಾಗಿ ಬಿಡುತ್ತದೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿ ಇನ್ನೂ ಜೀವದಲ್ಲಿದ್ದ ನಾಯಿಯ ಬಳಿ ಬಂದು ಕುಳಿತು ಅದರ ಮೈದಡವುತ್ತಾರೆ. ಬಳಿಕ ಎದೆಯ ಭಾಗವನ್ನು ಉಜ್ಜಿ ಒತ್ತಲಾರಂಭಿಸುತ್ತಾರೆ. ಆ ಮೂಲಕ ಅದರ ಹೃದಯ ಮತ್ತೆ ಕೆಲಸ ಮಾಡುವಂತೆ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೆ ನಾಯಿಯೂ ಸ್ಪಂದಿಸಿದೆ.
BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ
ನಾಯಿಯನ್ನು ಅಂಗಾತ ಮಲಗಿಸಿ ಎದೆಯ ಭಾಗವನ್ನು ಜೋರಾಗಿ ಒತ್ತಿದಾಗ ನಾಯಿ ನರಳುವ ಧ್ವನಿ ಹೊರಡಿಸುತ್ತಿರುತ್ತದೆ. ಕೆಲವು ಸೆಕೆಂಡ್‌ಗಳ ಕಾಲ ಎದೆಯ ಭಾಗವನ್ನು ಒತ್ತುವಾಗ ಸಣ್ಣದಾಗಿ ಬೊಗಳಿದೆ. ಬಳಿಕ ಕೂಡಲೇ ಸ್ಪಂದಿಸಿ ಎದ್ದು ಬಿಡುತ್ತದೆ. ಕೈಕಾಲುಗಳನ್ನು ಸರಿಪಡಿಸಿಕೊಂಡು ನಿಂತುಕೊಳ್ಳಲು ಪ್ರಯತ್ನಿಸಿದ ದೃಶ್ಯ ವಿಡಿಯೋದಲ್ಲಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ಹೃದ್ಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಅದಕ್ಕೆ “ಕರುಣಾ ಹೃದಯಿ ಮನುಷ್ಯರು ಇರುವಾಗ ಕೆಲವೊಮ್ಮೆ ಪವಾಡಗಳು ನಡೆದುಬಿಡುತ್ತವೆ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಹೃದಯಸ್ಪರ್ಶಿ ನಡೆಗೆ ಜನ ಮನಸೋತಿದ್ದಾರೆ. ನಾಯಿಯ ಜೀವ ಉಳಿಸಿದ ವ್ಯಕ್ತಿಗೆ ತಮ್ಮದೇ ಆದ ಪ್ರತಿಕ್ರಿಯೆಯೊಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅದರಲ್ಲೊಂದು ಪ್ರತಿಕ್ರಿಯೆ ಹೀಗಿದೆ – “ಸಿಪಿಆರ್ ಜೀವ ಉಳಿಸುವ ಅಗತ್ಯ ಕ್ರಮ. ಪ್ರತಿಯೊಬ್ಬರೂ ಅದರಲ್ಲಿ ಪರಿಣತರಾಗಿರಬೇಕು. ಪ್ರಾಣಿಗಳನ್ನೂ ಈ ರೀತಿ ಕಾಪಾಡಬಹುದು. ಅದಕ್ಕೆ ಅವುಗಳು ಕೂಡ ಅರ್ಹವಾಗಿವೆ.”