ಮಗುವಿನ ಜೀವನದಲ್ಲಿ ಪೋಷಕರ ನಂತರ ಹೆಚ್ಚು ಪ್ರಭಾವ ಬೀರುವ ವ್ಯಕ್ತಿಗಳೆಂದರೆ ಶಿಕ್ಷಕರು. ಜೀವನದ ಯಶಸ್ಸಿಗೆ ಶಿಕ್ಷಕರ ಮಾರ್ಗದರ್ಶನ ಅಗತ್ಯ. ಅಂತಹ ಗೌರವಾನ್ವಿತ ಶಿಕ್ಷಕ ವೃತ್ತಿಗೆ ಕಳಂಕ ತರುವಂತಹ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಶಾಲೆಗೆ ಕುಡಿದು ಬಂದಿದ್ದ ಶಿಕ್ಷಕ ಕುರ್ಚಿಯ ಮೇಲೆ ಆರಾಮವಾಗಿ ನಿದ್ರಿಸಿದ್ದಾನೆ. ಆತನನ್ನು ಎಬ್ಬಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕರ ಗುರುತು ಇನ್ನೂ ತಿಳಿದಿಲ್ಲ.
ವೈರಲ್ ವೀಡಿಯೊದಲ್ಲಿ ಶಿಕ್ಷಕ ಕುರ್ಚಿಯ ಮೇಲೆ ಮಲಗಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಅವನ ಸುತ್ತಲೂ ನೆರೆದು ಕೂಗಿ, ತಳ್ಳಾಡಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಣದ ಸ್ಥಿತಿ ಈಗಾಗಲೇ ಕಳಪೆಯಾಗಿದೆ. ಶಿಕ್ಷಕರ ಇಂತಹ ಬೇಜವಾಬ್ದಾರಿ ವರ್ತನೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದಾರೆ. ಬಹಿರಂಗವಾಗಿ ಇಂತಹ ಕೃತ್ಯಗಳಲ್ಲಿ ತೊಡಗುವ ದಿಟ್ಟತನ ಶಿಕ್ಷಕನಿಗೆ ಹೇಗೆ ಬಂತು ಎಂದು ಹಲವರು ಪ್ರಶ್ನಿಸಿದ್ದಾರೆ. ಶಿಕ್ಷಕನನ್ನು ವಜಾಗೊಳಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಲಾಗಿದೆ.