
ವೃತ್ತಿಯಲ್ಲಿ ಜೆಎನ್ಯು ವಿವಿಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ತಮ್ಮ ಸಮವಸ್ತ್ರದಲ್ಲೇ ಬಾಲಿವುಡ್ನ ಹಿಟ್ ಹಾಡು ‘ಜೂಲಿ ಜೂಲಿ’ಗೆ ಸ್ಟೆಪ್ ಹಾಕಿದ್ದಾರೆ. ಇದು ಮಿಥುನ್ ಚಕ್ರವರ್ತಿ, ಸಂಜಯ್ ದತ್ ಮತ್ತು ಗೋವಿಂದ ನಟಿಸಿದ 1987 ರ ಬಾಲಿವುಡ್ ಆಕ್ಷನ್ ಚಲನಚಿತ್ರ ಜೀತೆ ಹೈ ಶಾನ್ ಸೇ ಚಿತ್ರದ ಹಾಡಾಗಿದೆ.
ಭದ್ರತಾ ಸಿಬ್ಬಂದಿಯ ನೃತ್ಯ ನೋಡಿದ ಅಲ್ಲಿ ನೆರೆದಿದ್ದವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ನೃತ್ಯ ರಿಹರ್ಸಲ್ ಹಾಲ್ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳು ಸೆಕ್ಯೂರಿಟಿ ಗಾರ್ಡ್ ನೃತ್ಯಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಜೆಎನ್ಯು ರೌಂಡ್ ಟೇಬಲ್ ಎಂಬ ಟ್ವಿಟ್ಟರ್ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಲಾವಿದನ ಕಲೆ ಎಂದಿಗೂ ಕೂಡ ಸಾಯುವುದಿಲ್ಲ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಭದ್ರತಾ ಸಿಬ್ಬಂದಿ ಪ್ರತಿಭೆ ಕಂಡು ಮೂಕವಿಸ್ಮಿತರಾಗಿದ್ದಾರೆ. ಅನೇಕರು ವಿವಿಯ ವೈವಿಧ್ಯಮಯ ಮತ್ತು ಮುಕ್ತ ಸಂಸ್ಕೃತಿಯನ್ನು ಶ್ಲಾಘಿಸಿದ್ದಾರೆ.