
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ನಡೆ ಖಾಸಗಿತನಕ್ಕೆ ಧಕ್ಕೆ ತರುವಂತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ತೆಲಂಗಾಣ ಪೊಲೀಸರು ಜನತೆಯ ಮೊಬೈಲ್ ಫೋನ್ ಕಸಿದು ಅವರು ಎಲ್ಲಿಯಾದರೂ ಗಾಂಜಾ ಬಗ್ಗೆ ಚರ್ಚೆ ನಡೆಸಿದ್ದಾರಾ ಎಂಬುದನ್ನು ತಿಳಿದುಕೊಳ್ಳಲು ಚಾಟ್ ಗಳನ್ನು ಪರಿಶೀಲಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಪೊಲೀಸರು ವಾಹನಗಳನ್ನು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳನ್ನೇ ಅಡ್ಡಗಟ್ಟಿ ಮೊಬೈಲ್ ಕಸಿದಿದ್ದಾರೆ. ಫೋನ್ ಕಸಿದ ಪೊಲೀಸರು ಗಾಂಜಾ, ವೀಡ್, ಸ್ಟಫ್ ಎಂಬ ಬದ ಬಳಕೆಯನ್ನು ಸಂದೇಶ ರವಾನಿಸುವ ವೇಳೆ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜನತೆಯ ವೈಯಕ್ತಿಕ ಸಂದೇಶಗಳನ್ನು ಈ ರೀತಿ ಯಾವುದೇ ಅನುಮತಿ ಇಲ್ಲದೇ ಪರಿಶೀಲಿಸುವುದು ಖಾಸಗಿತನದ ಧಕ್ಕೆಯಾಗಿದೆ. ಪೊಲೀಸರು ಅಂದ ಮಾತ್ರಕ್ಕೆ ಜನತೆಯ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಲು ಸಾಧ್ಯವೇ..? ಇದು ಕಾನೂನು ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದು ನೆಟ್ಟಿಗರು ಕಿಡಿಕಾರ್ತಿದ್ದಾರೆ.