ಕೊರೊನಾ ಮೂರನೇ ಅಲೆಯು ಉತ್ತುಂಗದಲ್ಲಿದ್ದರೂ ಸೋಂಕಿನಿಂದ ಗಂಭೀರ ರೋಗಲಕ್ಷಣಗಳು ಇಲ್ಲವೆಂದು ತಿಳಿದ ಜನರು ಮನೆಯಲ್ಲಿ ಶುಭಕಾರ್ಯಗಳು, ಮದುವೆ, ನಾಮಕರಣ ಸಮಾರಂಭಗಳನ್ನು ಮಾಡುವುದು ಮತ್ತು ಇತರರ ಮನೆಗಳಿಗೆ ಭೇಟಿ ಕೊಡುವುದನ್ನು ಹೆಚ್ಚು ಮಾಡಿದ್ದಾರೆ.
ಎಷ್ಟೇ ದೂರವಿದ್ದರೂ ಕಾರು ಅಥವಾ ಬಸ್ಗಳಲ್ಲಿ ಎಂದಿನಂತೆಯೇ ಪ್ರಯಾಣಿಸುತ್ತಿದ್ದಾರೆ. ಮೂಗು, ಬಾಯಿಗೆ ಮಾಸ್ಕ್ ಅನ್ನು ಹೇಗೇಗೋ ಸುತ್ತಿಕೊಂಡು, ತೆರಳುವ ಜನರನ್ನು ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ನಿತ್ಯವೂ ಕಾಣಬಹುದಾಗಿದೆ.
ಆದರೆ, ಮಾಸ್ಕ್ ಬದಲು ಶಿಮ್ಲಾದಲ್ಲಿನ ಈ ವರನಿಗೆ ಅಡ್ಡಿಯಾಗಿದ್ದು ಹಿಮವರ್ಷ. ಹೌದು, ಶಿಮ್ಲಾದಲ್ಲಿ ಚಳಿಗಾಲದ ಆರ್ಭಟ ಶುರುವಾಗಿದ್ದು, ಹಿಮ ಜೋರಾಗಿಯೇ ಬೀಳುತ್ತಿದೆ. ಬಹುತೇಕ ರಸ್ತೆಗಳು ಮಂಜಿನಿಂದ ಮುಚ್ಚಿಹೋಗಿವೆ. ಹಿಮಾಚಲ ಪ್ರದೇಶದ ಅನೇಕ ಗುಡ್ಡಗಾಡು ಪ್ರದೇಶಗಳ ಸ್ಥಿತಿ ಇದು.
’ಹೋರಾಟ ಜಾರಿಯಲ್ಲಿದೆ, ಈ ಬಾರಿ ಕನಿಷ್ಠ ಬೆಂಬಲ ಬೆಲೆಗೆ’: ಮದುವೆ ಆಮಂತ್ರಣ ಪತ್ರದಲ್ಲೂ ಮೊಳಗಿದ ಘೋಷಣೆ
ಇಂಥದ್ದೇ ಗುಡ್ಡದ ಪ್ರದೇಶದ ತುಂಬೆಲ್ಲ ಮಂಜು ಸುರಿದಿದ್ದರಿಂದ ಮದುವೆ ಮಂಟಪಕ್ಕೆ ಸೇರಲು ಕಾರು ಉಪಯೋಗಕ್ಕೆ ಬರಲಿಲ್ಲ. ಹಾಗಾಗಿ ವರನೊಬ್ಬ ಜೆಸಿಬಿ ಯಂತ್ರವನ್ನು ತಂದು, ಅದರಲ್ಲಿ ರಸ್ತೆಯಲ್ಲಿನ ಮಂಜನ್ನು ಪಕ್ಕಕ್ಕೆ ಸರಿಸಿಕೊಂಡು ಕೊನೆಗೂ ಮದುವೆ ಮಂಟಪ ಮುಟ್ಟಿದ್ದಾನೆ. ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿ ಕೂಡ ವರನೊಬ್ಬ ಇದೇ ಮಾದರಿಯಲ್ಲಿ ಜೆಸಿಬಿ ವಾಹನದಲ್ಲೇ ಹಿಮವರ್ಷವನ್ನು ಎದುರಿಸುತ್ತಲೇ ವಿವಾಹ ಮಂಟಪಕ್ಕೆ ತಲುಪಿದ್ದು ದೊಡ್ಡ ಸುದ್ದಿಯಾಗಿತ್ತು.