ಕೊಳದಲ್ಲಿ ಮುಳುಗುತ್ತಿದ್ದ ಆನೆಯ ಮರಿಯನ್ನು ಎರಡು ದೊಡ್ಡ ಆನೆಗಳು ರಕ್ಷಿಸುವ ವಿಡಿಯೋ ವೊಂದು ನೆಟ್ಟಿಗರ ಮನ ಗೆದ್ದಿದೆ.
ಟ್ವಿಟರ್ನಲ್ಲಿ ಗೇಬ್ರಿಯೆಲ್ ಕಾರ್ನೊ ಎಂಬುವರು ಹಂಚಿಕೊಂಡ ವಿಡಿಯೊ ದಕ್ಷಿಣ ಕೊರಿಯಾದ ಸಿಯೋಲ್ ಮೃಗಾಲಯದ್ದಾಗಿದೆ. ಲಕ್ಷಾಂತರ ವೀಕ್ಷಣೆ ಕಂಡಿದ್ದು, ಸಾವಿರಾರು ಲೈಕ್ ಕಾಮೆಂಟ್ ಕೂಡ ಬಂದಿದೆ.
ವಿಡಿಯೋದ ಆರಂಭದಲ್ಲಿರುವಂತೆ ಮರಿ ಆನೆ ಮತ್ತು ಅದರ ತಾಯಿ ಕೊಳದ ನೀರು ಕುಡಿಯುತ್ತಿರುವಾಗ ಆನೆ ಮರಿ ಇದ್ದಕ್ಕಿದ್ದಂತೆ ಆಯತಪ್ಪಿ ನೀರಿನಲ್ಲಿ ಬಿದ್ದಿದೆ. ಇದನ್ನು ಕಂಡು ತಾಯಿ ಆನೆಯು ಭಯಭೀತವಾಗಿ ಮರಿಯನ್ನು ನೀರಿನಿಂದ ಮೇಲೆತ್ತಲು ಸಹಾಯ ಮಾಡುತ್ತದೆ. ಇದೇ ವೇಳೆ ಮತ್ತೊಂದು ಹಿರಿಯ ಆನೆಕೂಡ ಓಡಿಕೊಂಡು ಬಂದು ಮರಿ ಆನೆಯ ರಕ್ಷಣೆಗೆ ಪ್ರಯತ್ನ ಮಾಡುತ್ತದೆ.
ನೀರಿನಲ್ಲಿದ್ದ ಮರಿ ಆನೆಯು ತನ್ನ ಸೊಂಡಿಲನ್ನು ನೀರಿನ ಮೇಲೆ ಇಡಲು ಹೆಣಗಾಡುತ್ತಿತ್ತು. ಮುಳುಗುತ್ತಿರುವಂತೆ ತೋರುತ್ತಿತ್ತು. ಎರಡು ಆನೆಗಳು ಕೊಳಕ್ಕೆ ಧಾವಿಸಿ, ಮರಿಯು ಮುಳುಗದಂತೆ ಹಿಡಿದುಕೊಳ್ಳುತ್ತವೆ. ಬಳಿಕ ಸೊಂಡಿಲ ಮೂಲಕ ಕೊಳದ ಆಳವಿಲ್ಲದ ತುದಿಗೆ ತಂದು ಬಿಡುತ್ತವೆ. ದೊಡ್ಡ ಆನೆಗಳ ತ್ವರಿತ ಚಿಂತನೆ ಮತ್ತು ನಿಸ್ವಾರ್ಥತೆಯು ಆನೆ ಮರಿಯ ಜೀವವನ್ನು ಉಳಿಸಿತು. ಅಲ್ಲದೇ ಆನೆಗಳು ಎಷ್ಟು ಸಹಾನುಭೂತಿಯುಳ್ಳವು ಎಂಬುದನ್ನು ಸಾಬೀತುಪಡಿಸಿತು.