ಸ್ವಾಭಿಮಾನಿಗಳಾಗಿರುವ ಜನರು ಬೇಡಿ ತಿನ್ನದೇ, ಸ್ವತಃ ತಾವೇ ದುಡಿದು ತಿನ್ನಲು ಬಯಸುತ್ತಾರೆ. ಇಂತಹ ಜನರು ನಮ್ಮ ನಡುವೆ ಅನೇಕರಿದ್ದಾರೆ. ಹಾಗೆಯೇ ನಾಗ್ಪುರದ ಬೀದಿಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ವೃದ್ಧ ದಂಪತಿಗಳ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಸುಮಾರು 70 ವರ್ಷದ ವೃದ್ಧ ದಂಪತಿಗಳು ತಮ್ಮ ಜೀವನೋಪಾಯಕ್ಕಾಗಿ ನಾಗ್ಪುರದ ಬೀದಿಗಳಲ್ಲಿ ತರ್ರಿ ಪೋಹಾ ಮತ್ತು ಆಲೂ ಬೋಂಡಾವನ್ನು ಮಾರಾಟ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅದು ಕೂಡ ಈ ಖಾದ್ಯಗಳ ಬೆಲೆ ಕೇವಲ 10 ಮತ್ತು 15 ರೂ. ಮಾತ್ರ. ಬಾಡಿಗೆ ಮತ್ತು ಇತರ ಬಿಲ್‌ಗಳನ್ನು ಪಾವತಿಸಲು ಜೀವನೋಪಾಯಕ್ಕಾಗಿ ದುಡಿಯುವುದು ಅನಿವಾರ್ಯವಾಗಿದೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ಫುಡ್ ಬ್ಲಾಗರ್ ಜೋಡಿಯಾದ ವಿವೇಕ್ ಮತ್ತು ಆಯೇಶಾ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆ ಬೇಗನೇ ಎದ್ದು ಎಲ್ಲ ತಯಾರಿ ಮಾಡಿಕೊಂಡು 5 ಗಂಟೆ ವೇಳೆಗೆ ಮಾರಾಟದ ಸ್ಥಳಕ್ಕೆ ಬರುತ್ತಾರೆ. ಅವರು ನಾಗ್ಪುರ ಶೈಲಿಯ ತರ್ರಿ ಪೋಹಾವನ್ನು ಕೇವಲ 10 ರೂ.ಗಳಿಗೆ ಮಾರಾಟ ಮಾಡುತ್ತಾರೆ.
ಕಳೆದ 4 ವರ್ಷಗಳಿಂದ ಈ ಸಣ್ಣ ಸ್ಟಾಲ್‌ನಲ್ಲಿ ಅವರು ದುಡಿಯುತ್ತಾ ಜೀವನ ಮಾಡುತ್ತಿದ್ದಾರೆ. ನಾಗ್ಪುರದ ತಾಂಡಪೇತ್‌ನ ಪಂಡಿತ್ ನೆಹರೂ ಕಾನ್ವೆಂಟ್ ಬಳಿಯ ಸಣ್ಣ ರಸ್ತೆ ಬದಿಯಲ್ಲಿ ಇವರು ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಇಳಿ ವಯಸ್ಸಿನಲ್ಲೂ ಸ್ವಾಭಿಮಾನಿಗಳಾಗಿ ದುಡಿಯುತ್ತಿರುವುದಕ್ಕೆ ನೆಟ್ಟಿಗರು ವಂದಿಸಿದ್ದಾರೆ.