
ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಮರೆತು ಡ್ರಮ್ ವಾದನಕ್ಕೆ ರೋಗಿಗಳ ಮುಂದೆಯೇ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿವರ: ಹಾಪೂರ್ ಜಿಲ್ಲೆಯ ಗರ ರಸ್ತೆಯಲ್ಲಿರುವ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿಯೊಬ್ಬರು ಇತ್ತೀಚೆಗೆ ನಿವೃತ್ತಿಯಾಗಿದ್ದರು. ಅವರನ್ನು ಬೀಳ್ಕೊಡಲು ಆಸ್ಪತ್ರೆಯಲ್ಲಿಯೇ ಸಮಾರಂಭವನ್ನು ಆಯೋಜಿಸಲಾಗಿದ್ದು, ಬ್ಯಾಂಡ್ ಸೆಟ್ ಸಹ ಕರೆಸಲಾಗಿತ್ತು.
ಈ ಸಂದರ್ಭದಲ್ಲಿ ಕರ್ತವ್ಯ ಮರೆತ ವೈದ್ಯರು ಮತ್ತು ಸಿಬ್ಬಂದಿ ಬ್ಯಾಂಡ್ ಸೆಟ್ ವಾದನಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂಬುದನ್ನು ಸಹ ಇವರುಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ ರೋಗಿಗಳು ನರಳುತ್ತಿದ್ದರೂ ಸಹ ಚಿಕಿತ್ಸೆಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇವರುಗಳ ವಿರುದ್ಧ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.