ಸಾಮಾನ್ಯವಾಗಿ ಮಕ್ಕಳಿಗೆ ಹೇರ್ ಕಟ್ ಮಾಡಿಸುವುದು ಎಂದರೆ ತಂದೆ-ತಾಯಿಗಳಿಗೆ ಅದೊಂದು ಸಾಹಸವೇ ಸರಿ. ಕಟಿಂಗ್ ಶಾಪ್ ಗೆ ಮಕ್ಕಳನ್ನು ಕರೆದೊಯ್ದರೆ ಸಾಕು ಅಳಲಾರಂಭಿಸುತ್ತಾರೆ. ಅದರಲ್ಲೂ ಹೇರ್ ಕಟ್ ಗೆ ಚೇರ್ ಮೇಲೆ ಮಕ್ಕಳನ್ನು ಕೂರಿಸಿದರೆಂದರೆ ಒಂದೇ ಸಮನೇ ಗೊಳೋ ಎಂದು ಅಳಲಾರಂಭಿಸುತ್ತಾರೆ….. ಬಿಕ್ಕಿ ಬಿಕ್ಕಿ ಮಕ್ಕಳು ಅಳುವುದನ್ನು ನೋಡಿದರೆ ಇನ್ನೊಮ್ಮೆ ಸಲೂನ್ ಗೆ ಕರೆದುಕೊಂಡು ಬರಬಾರದು ಎಂದು ಎನಿಸದೇ ಇರಲಾರದು. ಆದರೆ ಇಲ್ಲೊಂದು ಮಗು ತದ್ವಿರುದ್ಧವಾಗಿ ನಡೆದುಕೊಂಡಿದೆ….! ಕಟಿಂಗ್ ಶಾಪ್ ನಲ್ಲಿ ಚೇರ್ ಮೇಲೆ ಕುಳಿತ ಮಗು ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. ಪುಟಾಣಿ ಮಗುವಿನ ನಗು ಎಂತವರನ್ನೂ ಬೆರಗಾಗಿಸುವಂತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿನ ಮಗು ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ. ಕಟಿಂಗ್ ಶಾಪ್ ನವನು ಹೇರ್ ಕಟ್ ಮಾಡಲು ಇನ್ನೇನು ಮುಂದಾಗುತ್ತಿದ್ದಂತೆ ಮಗು ಕಚಗುಳಿಯಿಟ್ಟವರಂತೆ ಮನದುಂಬಿ ನಗಲಾರಂಭಿಸಿದೆ. ಮುದ್ದು ಮಗುವಿನ ಮುಗ್ಧ ನಗು ನೆಟ್ಟಿಗರನ್ನು ನಕ್ಕು ನಕ್ಕು ಸುಸ್ತಾಗಿಸುವಂತಿದೆ.
ವೈರಲ್ ಆಗಿರುವ ಮಗುವಿನ ನಗು ಕಂಡು ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ತಾವು ಚಿಕ್ಕಂದಿನಲ್ಲಿದ್ದಾಗ ಕಟಿಂಗ್ ಶಾಪ್ ನಲ್ಲಿ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಹಂಚಿಕೊಳ್ಳುತ್ತಾ ಪುಟಾಣಿ ಮಗುವಿನ ನಗು ಕಂಡು ಖುಷಿಪಡುತ್ತಿದ್ದಾರೆ.