ಕ್ರಿಸ್ ಮಸ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಮಕ್ಕಳು ಕ್ರಿಸ್ ಮಸ್ ಟ್ರೀ, ವಿವಿಧ ಬಗೆಯ ಗಿಫ್ಟ್, ಸಾಂತಾಕ್ಲಾಸ್ ಡ್ರೆಸ್ ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಬಡವ-ಬಲ್ಲಿದರಿಂದ ಹಿಡಿದು ಎಲ್ಲರಲ್ಲಿಯೂ ಹಬ್ಬದ ಸಡಗರ-ಸಂಭ್ರಮ ಮನೆ ಮಾಡಿದೆ. ಈ ನಡುವೆ ಕ್ರಿಸ್ ಮಸ್ ಟ್ರೀ ಕೊಳ್ಳಲು ಬಡ ಬಾಲಕನನ್ನು ಸಂತಸಪಡಿಸಲು ಅಂಗಡಿಯ ಕೆಲಸದವಳು ಮೆರೆದ ಮಾನವೀಯತೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕ್ರಿಸ್ ಮಸ್ ಹಬ್ಬದ ಸಿದ್ಧತೆಯಲ್ಲಿದ್ದ ತಾಯಿ-ಮಗ ಅಂಗಡಿಗೆ ಬಂದಿದ್ದಾರೆ. ಬಾಲಕ ಅಂಗಡಿಯಲ್ಲಿದ್ದ ದೊಡ್ಡದಾದ ಕ್ರಿಸ್ ಮಸ್ ಟ್ರೀ ನೋಡಿ ಅದನ್ನು ಕೊಡಿಸುವಂತೆ ತಾಯಿ ಬಳಿ ಕೇಳಿದ್ದಾನೆ. ಆದರೆ ತಾಯಿ, ತನ್ನಬಳಿ ಅಷ್ಟು ಹಣವಿಲ್ಲದ ಕಾರಣಕ್ಕೆ ದೊಡ್ಡ ಟ್ರೀ ಪಕ್ಕದಲ್ಲಿದ್ದ ಚಿಕ್ಕ ಗಿಡವನ್ನು ಕೊಂಡುಕೊಳ್ಳಲು ಹೇಳುತ್ತಾಳೆ. ಇದಕ್ಕೆ ಬಾಲಕನಿಗೆ ಬೇಸರವಾಗಿ ಸಪ್ಪೆಮುಖ ಮಾಡಿಕೊಳ್ಳುತ್ತಾನೆ. ತಾಯಿ ಸಮಾಧಾನ ಮಾಡುತ್ತಿದ್ದಂತೆ ಇದೆಲ್ಲವನ್ನೂ ಗಮನಿಸುತ್ತಿದ್ದ ಅಂಗಡಿಯ ಅಸಿಸ್ಟೆಂಟ್ ಚಿಕ್ಕ ಕ್ರಿಸ್ ಮಸ್ ಟ್ರೀಗೆ ಇದ್ದ ಪ್ರೈಸ್ ಬೋರ್ಡ್ ನ್ನು ದೊಡ್ಡ ಗಿಡದ ಬಳಿ ಇಡುತ್ತಾಳೆ. ಇಷ್ಟು ಕಡಿಮೆ ಬೆಲೆ ಇರುವುದನ್ನು ಕಂಡು ಬಾಲಕ ಖುಷಿಯಿಂದ ಕುಣಿದಾಡುತ್ತಾನೆ.
ಬಾಲಕನ ತಾಯಿಯೂ ಸಂತೋಷದಿಂದ ದೊಡ್ಡ ಕ್ರಿಸ್ ಮಸ್ ಟ್ರೀಯನ್ನು ತೆಗೆದುಕೊಂಡು ಬಿಲ್ ಕೌಂಟರ್ ಬಳಿ ಬಂದು 2 ಡಾಲರ್ ಹಣವನ್ನು ಪಾವತಿಸುತ್ತಾಳೆ. ಇದೇ ವೇಳೆ ಅಂಗಡಿಯ ಅಸಿಸ್ಟೆಂಟ್, ತಾಯಿ-ಮಗನಿಗೆ ಗೊತ್ತಾಗದಂತೆ ದೊಡ್ಡ ಕ್ರಿಸ್ ಮಸ್ ಟ್ರೀಯ ಉಳಿದ ಮೊತ್ತವನ್ನು ಪಾವತಿಸುತ್ತಾಳೆ. ದೊಡ್ಡ ಕ್ರಿಸ್ ಮಸ್ ಟ್ರೀಯನ್ನು ಪಡೆದ ಬಾಲಕನ ಖುಷಿಗೆ ಪಾರವೇ ಇಲ್ಲ. ಸಂತೋಷದಿಂದ ಕುಣಿಯುತ್ತಾ ಬಾಲಕ ತಾಯಿ ಜೊತೆ ಅಂಗಡಿಯಿಂದ ತೆರಳುತ್ತಾನೆ. ದೊಡ್ಡ ಕ್ರಿಸ್ ಮಸ್ ಟ್ರೀಗಾಗಿ ಆಸೆ ಪಡುತ್ತಿದ್ದ ಬಾಲಕನನ್ನು ಖುಷಿಪಡಿಸಲು ಅಂಗಡಿಯ ಕೆಲಸದವಳು ಸ್ವತಃ ತನ್ನ ಕೈಯಿಂದ ಹಣ ನೀಡಿ ಮಾನವೀಯತೆ ಮೆರೆದಿರುವ ಈ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.