ರೋಬೋಟ್ ಒಂದು ಮಗುವಿನ ಮೇಲೆ ದಾಳಿ ಮಾಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ 19 ರಂದು ರಷ್ಯಾದಲ್ಲಿ ನಡೆದ ಮಾಸ್ಕೋ ಚೆಸ್ ಓಪನ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ.
ಪಂದ್ಯಾವಳಿಯ ಸಂದರ್ಭದಲ್ಲಿ ಚೆಸ್ ಆಡುವ ರೋಬೋಟ್ ಏಳು ವರ್ಷದ ಬಾಲಕನ ಬೆರಳು ಮುರಿಯುವುದನ್ನು ವಿಡಿಯೊದಲ್ಲಿ ಕಾಣಬಹುದು.
ರೋಬೋ ಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಸಮಯಕ್ಕಾಗಿ ಕಾಯದೆ ಬಾಲಕ ತ್ವರಿತವಾಗಿ ಪಾನ್ ಮೂವ್ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿದೆ.
ವಿಡಿಯೋ ಕ್ಲಿಪ್‌ನಲ್ಲಿ ಮಗುವಿನ ಬೆರಳುಗಳು ರೋಬೋಟ್‌ಗೆ ಸಿಕ್ಕಿಬಿದ್ದಿರುವುದು ಮತ್ತು ಮಹಿಳೆಯೊಬ್ಬರು ಅವನಿಗೆ ಸಹಾಯ ಮಾಡಲು ಧಾವಿಸುವುದು ಕಾಣಿಸುತ್ತದೆ. ಕೊನೆಗೆ ಮೂವರು ಆಗಮಿಸಿ ಹುಡುಗನ ಬೆರಳನ್ನು ರೋಬೋಟ್‌ನ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾರೆ.
ರೋಬೋ ಜೊತೆಗೆ ಆಡುವಾಗ ಕೆಲವು ಸುರಕ್ಷತಾ ನಿಯಮಗಳಿವೆ. ಮಗು ಸ್ಪಷ್ಟವಾಗಿ ಅವುಗಳನ್ನು ಉಲ್ಲಂಘಿಸಿದೆ. ರೋಬೋ ಮೂವ್‌ಗೆ ಕಾಯಬೇಕೆಂದು ಗಮನಿಸಲಿಲ್ಲ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ಆ ಬಾಲಕ ಚೆನ್ನಾಗಿಯೇ ಇದ್ದಾನೆ. ವೇಗವಾಗಿ ಗುಣವಾಗಲು ಬೆರಳಿಗೆ ಪ್ಲಾಸ್ಟರ್ ಹಾಕಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.