ಸಿನಿಮಾಗಳಲ್ಲಿ ಮದುವೆ ನಡೆಯುತ್ತಿರುವ ವೇಳೆ ಯಾರಾದ್ರೂ ಬಂದು ಮದುವೆ ನಿಲ್ಲಿಸಿ ಎಂದು ಹೇಳುವುದನ್ನು ಸಾಮಾನ್ಯವಾಗಿ ನೋಡಿರ್ತೀರಾ. ಹಾಗೆ ನಿಜ ಜೀವನದಲ್ಲೂ ವರ/ವಧುವಿನ ಪ್ರೇಮಿ ಮದುವೆ ಸ್ಥಳಕ್ಕೆ ಬಂದು ಗಲಾಟೆ ಮಾಡಿರುವ ಬಗ್ಗೆ ಹಲವಾರು ಘಟನೆಗಳು ನಡೆದಿವೆ. ಹಾಗೆಯೇ ಇಲ್ಲೊಂದೆಡೆ ವಿವಾಹದ ಸ್ಥಳಕ್ಕೆ ಆಗಮಿಸಿದ ಪ್ರಿಯಕರನೊಬ್ಬ ಕುಡಿದು ಗಲಾಟೆ ಮಾಡಿರೋ ವಿಡಿಯೋ ವೈರಲ್ ಆಗಿದೆ.
ಹೌದು, ವಧು-ವರ ವೇದಿಕೆ ಮೇಲೆ ನಿಂತು ಮದುವೆ ಶಾಸ್ತ್ರ ಪೂರೈಸುತ್ತಿರಬೇಕಾದ್ರೆ ಏಕಾಏಕಿ ಮಂಟಪದ ಬಳಿ ಬಂದ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು, ಬಾಲಿವುಡ್ ಸಿನಿಮಾದ ಡೈಲಾಗ್ ಗಳನ್ನು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಧು-ವರನ ಬಳಿ ಬಂದು ಕುಡಿದು ತೂರಾಡುತ್ತಾ ಸಿನಿಮಾ ಡೈಲಾಗ್ ಹೇಳುವುದನ್ನು ನೋಡಬಹುದು. ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲವಾದರೂ ನೋಡಲು ನಗು ತರಿಸುತ್ತದೆ.
ವೇದಿಕೆ ಬಳಿ ಬಂದು ತನ್ನ ಎದೆಯನ್ನು ಬಡಿದುಕೊಂಡ ವ್ಯಕ್ತಿ, ಎಲ್ಲರ ಮುಂದೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ತಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ. ನಿಜ ಹೇಳು, ತಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಅಲ್ವಾ…… ಹಾಗೆಯೇ ನೀನು ಕೂಡ ತನ್ನನ್ನು ಪ್ರೀತಿ ಮಾಡುತ್ತಿದ್ದಿ ಅಲ್ವಾ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ವಧು, ತನಗೆ ನೀನು ಯಾರೆಂದೇ ಗೊತ್ತಿಲ್ಲ. ನಿನ್ನನ್ನು ಇದೇ ಮೊದಲ ಬಾರಿ ನೋಡುತ್ತಿದ್ದು, ಮತ್ತೆ ಪ್ರೀತಿ ಎಲ್ಲಿಂದ ಬಂತು ಇಲ್ಲಿಂದ ಹೊರಟು ಹೋಗು ಎಂದು ಹೇಳುತ್ತಾ ಸಿಡಿಮಿಡಿಗೊಂಡಿದ್ದಾಳೆ. ಈ ದೃಶ್ಯ ನೋಡಿದ ವರ ಮಾತ್ರ ಕಕ್ಕಾಬಿಕ್ಕಿಯಾಗಿದ್ದಾನೆ.