ನಾವು ಮಾಡುವ ಒಂದು ನಿಮಿಷದ ಕೆಲಸ ಯಾರದೋ ಜೀವನವನ್ನು ಸುಂದರವಾದ ಕ್ಷಣಗಳನ್ನಾಗಿ ಮಾಡಬಲ್ಲದು ಎಂದರೆ ನಾವ್ಯಾಕೆ ಆ ಕೆಲಸ ಮಾಡಬಾರದು? ವೈರಲ್ ಆಗಿರುವ ಇದೊಂದು ವಿಡಿಯೋ ನಿಜಕ್ಕೂ ಉತ್ತಮ ನಿದರ್ಶನವಾಗಿದೆ.
ರಸ್ತೆ ಪಕ್ಕದಲ್ಲಿ ಮಣ್ಣು ತೆಗೆಯುತ್ತಿದ್ದ ಬೃಹತ್ ಜೆಸಿಬಿಯನ್ನು ಕಂಡ ಪುಟ್ಟ ಬಾಲಕನೊಬ್ಬ ತನ್ನ ಆಟಿಕೆ ಲಾರಿಯನ್ನು ಹಿಡಿದು ರಸ್ತೆ ದಾಟಿ ಬಂದು ಜೆಸಿಬಿ ಮುಂದೆ ಇಡುತ್ತಾನೆ. ಬಾಲಕನ ಮುಗ್ಧತೆಗೆ ಮನಸೋತ ಜೆಸಿಬಿ ಚಾಲಕ ಹಾಗೂ ಸಿಬ್ಬಂದಿಗಳು ಬಾಲಕನ ಲಾರಿಗೆ ಮಣ್ಣನ್ನು ತುಂಬುತ್ತಾರೆ.
ಜೆಸಿಬಿಗೆ ತಾನೇನೋ ಸಹಾಯ ಮಾಡಿದೆನೆಂಬ ಖುಷಿಯಲ್ಲಿ ಪುಟ್ಟ ಬಾಲಕ ಕುಣಿದು ಕುಪ್ಪಳಿಸುತ್ತಾನೆ. ಜೊತೆಗೆ ಅಲ್ಲಿದ್ದ ಸಿಬ್ಬಂದಿಗಳು ಬಾಲಕನ ಕೈ ಕುಲುಕಿ ಧನ್ಯವಾದ ಹೇಳುತ್ತಾರೆ. ಪುಟ್ಟ ಬಾಲಕನ ಮುಗ್ಧತೆಗೆ ಅಲ್ಲಿದ್ದ ಸಿಬ್ಬಂದಿಗಳ ಸ್ಪಂದನೆ….. ಮಗುವಿನ ಸಂತಸ ಕಂಡ ರಸ್ತೆ ಕೆಲಸದಲ್ಲಿ ನಿರತರಾಗಿದ್ದ ಸಿಬ್ಬಂದಿ, ಜೆಸಿಬಿ ಚಾಲಕನಿಗೂ ಸಾರ್ಥಕತೆಯ ಭಾವ.
ಪುಟ್ಟ ಮಕ್ಕಳೆಂದರೆ ಹಾಗೆ ಅವರ ಆಟ-ಪಾಠ-ಮಾತು ಎಲ್ಲವೂ ಚಂದ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.