ಪಾಟ್ನಾ: ಬಿಹಾರ ರಾಜ್ಯ ವಿಧಾನಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ವಾದಿ-ಲೆನಿನಿಸ್ಟ್ (ಸಿಪಿಐ-ಎಂಎಲ್) ಶಾಸಕರು ಭಾರಿ ಗದ್ದಲವನ್ನೇ ಸೃಷ್ಟಿಸಿದ್ದಾರೆ. ಈ ವೇಳೆ ಶಾಸಕರನ್ನು ಎತ್ತಿ ಹಿಡಿದು ಮಾರ್ಷಲ್ಗಳು ಹೊರಗೆ ಹಾಕಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಹಲವು ಶಾಸಕರು ಸದನಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಾಯಕರನ್ನು ಹೊರಗೆ ಕರೆದುಕೊಂಡು ಹೋಗುವಂತೆ ವಿಧಾನಸಭೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಯಿತು. ಈ ವೇಳೆ ಒಟ್ಟು ಎಂಟು ಶಾಸಕರನ್ನು ಮಾರ್ಷಲ್ಗಳು ಸದನದಿಂದ ಹೊರಗೆ ಕರೆದೊಯ್ದಿದ್ದಾರೆ.
ಕನಿಷ್ಠ ಆರು ಮಾರ್ಷಲ್ಗಳು ಶಾಸಕರನ್ನು ಅವರ ಕಾಲುಗಳು, ತೋಳುಗಳನ್ನು ಹಿಡಿದುಕೊಂಡು ಹೊರಗಡೆ ಎಳೆದೊಯ್ದಿದ್ದಾರೆ. ಒಬ್ಬೊಬ್ಬ ಶಾಸಕರನ್ನೇ ಹೀಗೆ ಎತ್ತಿ ಹೊರಗೆ ಹಾಕಿದ್ದಾರೆ. ಮಹಿಳೆಯರ ಮೇಲೆ ಸರಣಿ ಕೊಲೆಗಳು ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ-ಮುಸ್ಲಿಂ ಎಂಬ ಭಿನ್ನಾಭಿಪ್ರಾಯ ಸೃಷ್ಟಿಸುವ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಅದರ ಬಗ್ಗೆ ಚರ್ಚೆ ಬಯಸಿದ್ದೇವೆ. ಆದರೆ ಈ ಸರ್ಕಾರ ಚರ್ಚೆಗೆ ಸಿದ್ಧರಿರಲಿಲ್ಲ. ಮಾರ್ಷಲ್ಗಳ ಸಹಾಯದಿಂದ ನಮ್ಮನ್ನು ಹೊರಹಾಕಿದ್ದಾರೆ ಎಂದು ಸಿಪಿಐ(ಎಂ-ಎಲ್) ಶಾಸಕ ಬೀರೇಂದ್ರ ಪ್ರಸಾದ್ ಗುಪ್ತಾ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿರುವ ವಿಡಿಯೋ ಕೆಲವೇ ಗಂಟೆಗಳಲ್ಲಿ 25,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಾರ್ಷಲ್ಗಳು ಶಾಸಕರನ್ನು ನಡೆಸಿಕೊಂಡು ಬಂದ ರೀತಿಯನ್ನು ನೆಟ್ಟಿಗರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೆತ್ತವರು ಮಕ್ಕಳನ್ನು ಶಾಲೆಗೆ ಎಳೆದುಕೊಂಡು ಹೋಗುವುದನ್ನು ನೆನಪಿಸುತ್ತದೆ ಎಂದು ಕೆಲವು ಬಳಕೆದಾರರು ತಮಾಷೆ ಮಾಡಿದ್ದಾರೆ.