ದೇಶಾದ್ಯಂತ ಹೋಳಿ ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಪರಸ್ಪರ ಬಣ್ಣ ಎರಚುವ ಮೂಲಕ, ಕಾಮಣ್ಣನ ದಹನ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗಿದೆ. ಆದರೆ, ದೇಶದ ಕೆಲವೆಡೆ ಮಾತ್ರ ಹೋಳಿ ಆಚರಣೆಯು ಅತಿರೇಕಕ್ಕೆ ಹೋಗಿ ಒಂದಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವೊಂದು ಕಡೆ ಬಣ್ಣ ಎರಚುವ ಅವಸರದಲ್ಲಿ ಅವಘಡಗಳು ಸಂಭವಿಸಿವೆ.
ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ಕಳೆದ ಶನಿವಾರ ಯುವಕರಿಬ್ಬರು ಬಣ್ಣದ ನೀರು ತುಂಬಿದ ಬಲೂನ್‌ಗಳನ್ನು ಚಲಿಸುತ್ತಿದ್ದ ಆಟೋ ಡ್ರೈವರ್ ಮೇಲೆ ಎಸೆದಿದ್ದು, ಇದರಿಂದ ಚಾಲಕ ವಿಚಲಿತನಾದ ಕಾರಣ ಆಟೋ ರಸ್ತೆ ಮೇಲೆಯೇ ಮಗುಚಿ ಬಿದ್ದಿದೆ. ಚಲಿಸುತ್ತಿದ್ದ ಆಟೋಗೆ ಏಕಾಏಕಿ ಬಣ್ಣದ ಬಲೂನ್ ಎಸೆದ ಕಾರಣ ವೇಗವಾಗಿ ಆಟೋ ಚಲಿಸುತ್ತಿದ್ದ ಡ್ರೈವರ್‌ಗೆ ನಿಯಂತ್ರಣ ತಪ್ಪಿದೆ. ಆಟೋ ಮಗುಚಿ ಬಿದ್ದ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಟೋದಲ್ಲಿ ಚಾಲಕ ಸೇರಿ ಮೂರ್ನಾಲ್ಕು ಜನ ಕುಳಿತಿದ್ದು, ಎಷ್ಟು ಜನರಿಗೆ ಗಾಯಗಳಾಗಿವೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಯಾರಿಗೂ ಪ್ರಾಣಾಪಾಯ ಎದುರಾಗಿಲ್ಲ ಎಂದು ತಿಳಿದುಬಂದಿದೆ. ತಾವು ಹೊಡೆದ ಬಲೂನಿನಿಂದ ಆಟೋ ರಸ್ತೆ ಮೇಲೆ ಮಗುಚಿ ಬೀಳುತ್ತಲೇ ಇಬ್ಬರು ಯುವಕರು ಓಡಿ ಹೋಗಿರುವ ದೃಶ್ಯವೂ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಹಬ್ಬದ ಆಚರಣೆಯು ಸಂತಸ-ಸಂಭ್ರಮದಿಂದ ಕೂಡಿರಬೇಕೇ ಹೊರತು, ಹೀಗೆ ಪ್ರಾಣಕ್ಕೇ ಕುತ್ತು ತರುವ ರೀತಿಯಲ್ಲಿ ಆಚರಣೆ ಇರಬಾರದು ಎಂದು ವಿಡಿಯೊ ನೋಡಿದ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.