ಫುಡ್ ಡಿಲಿವರಿ ಏಜೆಂಟ್‌ಗಳು ತಮ್ಮ ಕೆಲಸದಲ್ಲಿ ಏನೆಲ್ಲಾ ಕಷ್ಟ ಪಡುತ್ತಾರೆ ಎಂಬ ಬಹಳಷ್ಟು ಕಥೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಬಿಸಿಲು, ಮಳೆ, ಚಳಿಗಳನ್ನು ಲೆಕ್ಕಿಸದೇ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಲು ಎಜೆಂಟರು ಪಡುವ ಪಾಡಿನ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿವೆ.
ಆದರೆ ಫುಡ್ ಡೆಲಿವರಿ ರೈಡರ್ ಒಬ್ಬರು ಗ್ರಾಹಕರ ಆರ್ಡರ್ ತೆಗೆದುಕೊಳ್ಳಲೆಂದು ರೆಸ್ಟೋರೆಂಟ್ ಒಂದಕ್ಕೆ ಹೋದ ವೇಳೆ ತಾಳ್ಮೆ ಕಳೆದುಕೊಂಡು ಸಿಬ್ಭಂದಿ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ರೆಸ್ಟೋರೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.
ಮಲೇಷ್ಯಾದ ಪೆನಾಂಗ್‌ನಲ್ಲಿ ಮಾರ್ಚ್ 29ರಂದು ಈ ಘಟನೆ ಜರುಗಿದೆ. ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಬಳಿಕ ಅವರ ಮೇಲೆ ಕೌಂಟರ್‌ನಲ್ಲಿದ್ದ ಪಾನೀಯಗಳನ್ನು ಎಸೆದ ಈ ಏಜೆಂಟ್, ಬಳಿಕ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಮೆನು ಕಾರ್ಡ್ ಸಹ ಎಸೆದಿದ್ದಾನೆ.
ಫುಡ್ ಪಾಂಡಾ ಡೆಲಿವರಿ ಆಪ್ ಮೂಲಕ ಆರ್ಡರ್ ಪಡೆದ ಫ್ಯೂಮಿ ಹನಿ ಹೌಸ್, ಡೆಲಿವರಿ ವ್ಯಕ್ತಿ 30 ನಿಮಿಷಗಳಾದರೂ ಕಾಣದೇ ಇದ್ದ ಕಾರಣ, ಈ ಆರ್ಡರ್‌ನ ಡೆಲಿವರಿಯನ್ನು ಬೇರೊಬ್ಬರಿಗೆ ವಹಿಸಲಾಗಿತ್ತು. ಆದರೆ ಮೊದಲಿಗೆ ಆರ್ಡರ್ ವಹಿಸಲ್ಪಟ್ಟಿದ್ದ ಏಜೆಂಟ್ 45 ನಿಮಿಷಗಳ ಬಳಿಕ ತನ್ನ ಸ್ನೇಹಿತನೊಂದಿಗೆ ಮತ್ತೆ ಕಾಣಿಸಿಕೊಂಡಿದ್ದಾನೆ.
ಈ ವೇಳೆ ತನ್ನ ಆರ್ಡರ್ ಅಸೈನ್ಮೆಂಟ್ ರದ್ದಾದ ಕಾರಣದಿಂದ ಕುಪಿತಗೊಂಡು ಆತ ಹೀಗೆ ಮಾಡಿದ್ದಾನೆ.