ಮಕ್ಕಳ ಹೃದಯ ಪರಿಶುದ್ಧತೆ, ಮುಗ್ಧತೆಗೆ ಬೆಲೆ ಕಟ್ಟಲಾಗದು. ತಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ.
ವಿಶೇಷವಾಗಿ ಪುಟ್ಟ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಇರುವಾಗ ಅಥವಾ ಅವರು ದಣಿದಾಗ ಮತ್ತು ನಿದ್ದೆ ಮಾಡುವಾಗ ಮೈ ಮರೆತುಬಿಡುತ್ತವೆ.
ಅಂತಹ ಒಂದು ಘಟನೆಯು ಚೀನಾದ ಚಾಂಗ್ಕಿಂಗ್ನಲ್ಲಿ ಸಂಭವಿಸಿದೆ. ಅಲ್ಲಿ 3 ವರ್ಷದ ಮಗು ಡ್ಯಾನ್ಸ್ ಪ್ರಸ್ತುತಪಡಿಸುವ ನಡುವೆ ವೇದಿಕೆಯ ಮೇಲೆ ನಿದ್ರೆಗೆ ಜಾರಿತು.
ಚಿಟ್ಟೆಯಂತೆ ಕಂಗೊಳಿಸುತ್ತಿದ್ದ ಅಂಬೆಗಾಲಿಡುವ ಮಗು ಕೆಲ ಸಮಯ ರೇಷ್ಮೆ ಹುಳುವಿನಂತೆ ಹರಿದಾಡುತ್ತಿದೆ ಎಂದು ಸಭಿಕರು ಭಾವಿಸಿದ್ದರು. ಉಳಿದ ಮಕ್ಕಳೆಲ್ಲ ನೃತ್ಯ ಮಾಡುವಾಗ ಒಂದು ಮಗು ಮಾತ್ರ ಪ್ರತ್ಯೇಕವಾಗಿ ಹಿಂದೆ ಮಲಗಿದಂತೆ ಕಾಣಿಸುತ್ತಿತ್ತು.
ಆ ಮಗು ಏನೋ ಮಾಡುತ್ತಿದೆ ಎಂದು ಪ್ರೇಕ್ಷಕರು ಆರಂಭದಲ್ಲಿ ಭಾವಿಸಿದ್ದರು, ಬಳಿಕ ಅವಳು ಮಲಗಿದ್ದಾಳೆ ಎಂದು ಎಲ್ಲರಿಗೂ ಅರ್ಥವಾಯಿತು.
ಇದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ. ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.