ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜಲಪಾತದ ಕೆಳಗಿರುವ ಕೊಳದಲ್ಲಿ ಬಿದ್ದ ಇಬ್ಬರನ್ನು ಸಿಖ್ ಪುರುಷರ ರಕ್ಷಿಸಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 11 ರಂದು ಕುಲ್ಜಿಂದರ್ ಕಿಂಡಾ ಮತ್ತು ಆತನ ನಾಲ್ವರು ಸ್ನೇಹಿತರು ಗೋಲ್ಡನ್ ಇಯರ್ಸ್ ಪ್ರಾಂತೀಯ ಉದ್ಯಾನವನದಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಇಬ್ಬರು ಪುರುಷರು ಬಂಡೆಯ ಮೇಲಿಂದ ಜಾರಿ ಕೆಳ ಜಲಪಾತದ ಬಳಿಯ ಕೊಳದಲ್ಲಿ ಬಿದ್ದಿದ್ದಾರೆ.
ಸಹಾಯಕ್ಕಾಗಿ ಅಲ್ಲಿದ್ದ ಜನರು ತುರ್ತು ಸೇವೆಗಳಿಗೆ ಸಂಪರ್ಕಿಸಲು ಪ್ರಯತ್ನಿಸಿದರೂ, ಸಾಧ್ಯವಾಗಿಲ್ಲ. ಈ ವೇಳೆ ಐವರು ಸಿಖ್ ರು ತಮ್ಮ ಪೇಟದಿಂದ ಹಗ್ಗವನ್ನು ಮಾಡುವ ಆಲೋಚನೆ ಮಾಡಿದ್ದಾರೆ. ಅವರೆಲ್ಲರೂ ತಮ್ಮ ಟರ್ಬನ್ ಮತ್ತು ಬಟ್ಟೆಯ ಇತರ ವಸ್ತುಗಳನ್ನು ತೆಗೆದು ಬಟ್ಟೆಯನ್ನು ಗಂಟು ಹಾಕಿ, 10 ಮೀಟರ್‌ಗಳ ತಾತ್ಕಾಲಿಕ ಹಗ್ಗವನ್ನು ರಚಿಸಿದ್ದಾರೆ. ಅದನ್ನು ಮುಳುಗುತ್ತಿದ್ದವರತ್ತ ಎಸೆದು, ಅವರನ್ನು ಹಗ್ಗದ ಮುಖಾಂತರ ಎಳೆದು ರಕ್ಷಿಸಿದ್ದಾರೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸಿಖ್ ಸಮುದಾಯವನ್ನು ಪ್ರತಿನಿಧಿಸುವ ಅಧಿಕೃತ ಟ್ವಿಟ್ಟರ್ ಖಾತೆಯು ಈ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಿದೆ. “ಈ ಯುವಕರಿಗೆ ಅವರ ತ್ವರಿತ ಚಿಂತನೆ ಮತ್ತು ನಿಸ್ವಾರ್ಥತೆಗಾಗಿ ಅಭಿನಂದನೆಗಳು” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ರಕ್ಷಣೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರುಗಳ ತ್ವರಿತ ಚಿಂತನೆ ಮತ್ತು ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.