ಇತ್ತೀಚೆಗೆ ಸೆಲ್ಫಿ ತೆಗೆದುಕೊಳ್ಳುವುದು ಒಂಥರಾ ಗೀಳಾಗಿ ಮಾರ್ಪಟ್ಟಿದೆ. ಆದರೆ, ಸೆಲ್ಫಿಯನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಕ್ಲಿಕ್ಕಿಸಬೇಕು ಎಂಬ ಮಿತಿಯನ್ನು ಜನರು ಹೆಚ್ಚಾಗಿ ಮರೆತುಬಿಡುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕರು ಸಾವಿಗೀಡಾಗಿರುವ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಇದೀಗ ವ್ಯಕ್ತಿಯೊಬ್ಬ ಕೇದಾರನಾಥ ಹೆಲಿಪ್ಯಾಡ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿರುವ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ.
ಈ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ವ್ಯಕ್ತಿಯ ಅಜಾಗರೂಕ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನನಾಗಿದ್ದ ವ್ಯಕ್ತಿಯನ್ನು ಹೆಲಿಪ್ಯಾಡ್ ಸಿಬ್ಬಂದಿ ಗಮನಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಸಿಬ್ಬಂದಿ ಸಂಭವನೀಯ ಅನಾಹುತವನ್ನು ತಪ್ಪಿಸಿದರು. ಬಳಿಕ ಹೆಲಿಕಾಪ್ಟರ್ ಸುಗಮವಾಗಿ ಹಾರಾಟ ನಡೆಸಿತು.
ಟ್ವಿಟ್ಟರ್‌ನಲ್ಲಿ ವೈರಲ್ ಆದ ವಿಡಿಯೋದಲ್ಲಿ, ರನ್‌ವೇಗೆ ಹತ್ತಿರದಲ್ಲಿ ಅಪಾಯಕಾರಿಯಾಗಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದನ್ನು ಸೆರೆಹಿಡಿಯುತ್ತದೆ.
ಕೂಡಲೇ ಹೆಲಿಕಾಪ್ಟರ್ ಸೇವಾ ಸಿಬ್ಬಂದಿ ವ್ಯಕ್ತಿಯ ಕಡೆಗೆ ಧಾವಿಸಿ ಬಂದಿದ್ದಾರೆ. ತುರ್ತಾಗಿ ಅವನನ್ನು ವಿಮಾನ ಮಾರ್ಗದಿಂದ ದೂರಕ್ಕೆ ಕಳುಹಿಸಿದ್ದಾರೆ. ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ರೂ ವ್ಯಕ್ತಿಯು ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ನಿರತನಾಗಿದ್ದ. ಇದರಿಂದ ಸಿಟ್ಟಿಗೆದ್ದ ಹೆಲಿಪ್ಯಾಡ್ ಸಿಬ್ಬಂದಿ ಸ್ಥಳಕ್ಕೆ ಬಂದು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ, ಆ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದಾನೆ. ಮತ್ತೊಬ್ಬ ಸಿಬ್ಬಂದಿ ಓಡಿ ಆತನಿಗೆ ಒದೆ ಕೊಟ್ಟಿದ್ದಾರೆ.
ಇದನ್ನು ನೋಡ್ತಿದ್ದರೆ ನಿಂಗಿದು ಬೇಕಿತ್ತಾ ಮಗನೇ ಎಂಬ ಹಾಡು ನೆನಪಾಗಿ ನಗು ಬರೋದಂತೂ ಸುಳ್ಳಲ್ಲ. ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ. ಬಳಕೆದಾರರೊಬ್ಬರು, ಆ ವ್ಯಕ್ತಿಗೆ ಸಿನಿಮಾದ ರೀತಿಯಲ್ಲಿ ಒದೆಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.