ಇ – ಕ್ಯಾಬ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಉಬರ್, ವೋಲಾದಲ್ಲಿ ಸಂಚರಿಸಲು ಇಷ್ಟಪಡ್ತಾರೆ. ಆದ್ರೆ ಇವು ಕೂಡ ನಮಗೆ ಬೇಕಾದ ತಕ್ಷಣ ಸಿಗೋದಿಲ್ಲ. ಹಾಗೆ ದರಗಳು ಕೂಡ ಏರುಪೇರಾಗ್ತಿರುತ್ತವೆ. ಪೀಕ್ ಟೈಂನಲ್ಲಿ ಕ್ಯಾಬ್ ಬೆಲೆ ಹೆಚ್ಚಿರುತ್ತದೆ. ಅದ್ರಲ್ಲೂ ಮಳೆ ಬಂತು ಅಂದ್ರೆ ಕ್ಯಾಬ್ ಸಿಗೋದೇ ಕಷ್ಟ. ಸಿಕ್ಕ ಕ್ಯಾಬ್ ಬೆಲೆ ಕೂಡ ಹೆಚ್ಚಿರುತ್ತದೆ. ಆದ್ರೆ ಇಲ್ಲೊಬ್ಬ ಬುಕ್ ಮಾಡಿದ ಕ್ಯಾಬ್ ದರ ನೋಡಿ ದಂಗಾಗಿದ್ದಾನೆ.
ಮಳೆ ಬರ್ತಿದ್ದ ಕಾರಣ ಆತ ಉಬರ್ ಬುಕ್ ಮಾಡಿದ್ದಾನೆ. ಆದ್ರೆ ಅಲ್ಲಿನ ಬಿಲ್ ನೋಡಿ ದಂಗಾಗಿದ್ದಾನೆ. ತಕ್ಷಣ ಅದ್ರ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
LinkedIn ಬಳಕೆದಾರ ಸೂರ್ಯ ಪಾಂಡೆ ಇತ್ತೀಚೆಗೆ ಉಬರ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಸ್ಕ್ರೀನ್‌ಶಾಟ್‌ನೊಂದಿಗೆ ಅವರು, ನಾನು ಷೇರು ಮಾರುಕಟ್ಟೆಯ ಬದಲಿಗೆ ಉಬರ್‌ನ ಉಲ್ಬಣ ಬೆಲೆಯಲ್ಲಿ ಹೂಡಿಕೆ ಮಾಡಿದ್ದರೆ, ನಾನು ಹರ್ಷದ್ ಮೆಹ್ತಾ ಅವರನ್ನೂ ಮೀರಿಸುತ್ತಿದ್ದೆ ಎಂದು ಬರೆದಿದ್ದಾರೆ.
ಓಲಾ, ಉಬರ್ ಅಥವಾ ರಾಪಿಡೋದಂತಹ ಕಂಪನಿಗಳು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿವೆ. ಆದ್ರೆ ಅದು ಆಗ್ತಿಲ್ಲ ಎಂದಿರುವ ಅವರು, ತಮ್ಮ ಪ್ರಯಾಣದ ವಿವರ ಬರೆದಿದ್ದಾರೆ.
ಸಣ್ಣ ಮಳೆ ಬರ್ತಾ ಇರುವ ಸಮಯದಲ್ಲಿ ಗುರ್ಗಾಂವ್ ನಿಂದ ಅವರು ಕ್ಯಾಬ್ ಬುಕ್ ಮಾಡಿದ್ದರು. ಅವರು ಕೇವಲ 1.8 ಕಿಲೋಮೀಟರ್ ಹೋಗಬೇಕಿತ್ತು. ಇದಕ್ಕಾಗಿ ಅವರು ಉಬರ್ ನಲ್ಲಿ ಕ್ಯಾಬ್ ಪರಿಶೀಲಿಸಿದ್ದಾರೆ. 4 ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಉಬರ್-ಗೋ ಬೆಲೆ 700 ರೂಪಾಯಿ ತೋರಿಸಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ 6 ಆಸನಗಳ Uber-XL ಬೆಲೆ 588 ರೂಪಾಯಿ ತೋರಿಸಿದೆ. ಚಿಕ್ಕ ಕಾರಿನ ಬೆಲೆ ಹೆಚ್ಚಿತ್ತು ಮತ್ತು ದೊಡ್ಡ ಕಾರಿನ ಬೆಲೆ ಕಡಿಮೆ ಇತ್ತು ಎಂದು ಅವರು ಬರೆದಿದ್ದಾರೆ.