ಟೆಸ್ಲಾ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದರ ತೀವ್ರತೆ ಪಕ್ಕದ ಮನೆಗೂ ಕೂಡ ವ್ಯಾಪಿಸಿರುವ ಘಟನೆ ಪೆನ್ಸಿಲ್ವೇನಿಯಾದಲ್ಲಿ ವರದಿಯಾಗಿದೆ.
ಕಾರಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಕೂಡಲೇ ಪಕ್ಕದಲ್ಲಿದ್ದ ಮನೆಗೆ ವ್ಯಾಪಿಸಿದೆ. ಅದೃಷ್ಟವಶಾತ್ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಮನೆಗೆ ಆಗಿರುವ ಹಾನಿಯ ಪ್ರಮಾಣದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕಾರಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ತನಿಖಾಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.
ಕಾರಿಗೆ ಬೆಂಕಿ ಹೊತ್ತಿಕೊಂಡ ವೇಳೆ ಕಾರು ಚಾರ್ಜ್ ಆಗುತ್ತಿತ್ತು ಎಂದು ವರದಿಗಳು ಹೇಳಿವೆ. ಗ್ಯಾರೇಜ್ ಮತ್ತು ಮನೆಯ ಬದಿಯು ಸಂಪೂರ್ಣವಾಗಿ ಸುಟ್ಟುಹೋಗಿರುವ ಫೋಟೋವನ್ನು ಫೋರ್ಟ್ ವಾಷಿಂಗ್ಟನ್ ಫೈರ್ ಕಂಪನಿ ಹಂಚಿಕೊಂಡಿದೆ.
ಪ್ರತ್ಯಕ್ಷದರ್ಶಿಯೊಬ್ಬರು ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಕಾರನ್ನು ಮನೆಯ ದಾರಿಯಲ್ಲಿ ನಿಲ್ಲಿಸಿ ಚಾರ್ಜ್ ಮಾಡಲಾಗುತ್ತಿತ್ತು. ಈ ವೇಳೆ ಕಾರಿನ ಹಿಂಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ.
ಫಾಕ್ಸ್ ಬಿಸಿನೆಸ್ ವರದಿಯ ಪ್ರಕಾರ, ಈ ಮೊದಲು ಟೆಸ್ಲಾ ಮಾಡೆಲ್ ಎಸ್ ಪ್ಲೈಡ್ ಅನ್ನು ಡ್ರೈವಿಂಗ್ ಮಾಡುತ್ತಿರುವ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಟೆಸ್ಲಾ ಕಾರುಗಳು ತಮ್ಮ ಪಾತ್ ಬ್ರೇಕಿಂಗ್ ತಂತ್ರಜ್ಞಾನ ಮತ್ತು ಜೀವಗಳನ್ನು ಉಳಿಸಬಲ್ಲ ಸುರಕ್ಷತಾ ವೈಶಿಷ್ಟ್ಯಗಳಿಗೆ ಪ್ರಸಿದ್ಧವಾಗಿವೆ. ತಮ್ಮ ಸುಧಾರಿತ ಆಟೋಪೈಲಟ್ ಅಥವಾ ರಿಮೋಟ್ ಡ್ರೈವಿಂಗ್ ವೈಶಿಷ್ಟ್ಯಗಳಿಗೆ ಈ ಕಾರು ಪ್ರಸಿದ್ಧಿ ಪಡೆದಿದೆ.