ಹಾವಿನ ಹೆಸರು ಕೇಳಿದ್ರೆ ಅನೇಕರು ಹೆದರುತ್ತಾರೆ. ಹಾವಿನ ಬಗ್ಗೆ ಅನೇಕ ಸುದ್ದಿಗಳು ಪ್ರತಿ ದಿನ ಕೇಳ್ತಿರುತ್ತವೆ. ಹಾವಿನ ಜೊತೆ ತಮಾಷೆ ಮಾಡಿದ್ರೆ ಅದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ರಷ್ಯಾದಲ್ಲಿ ಇಂತಹದ್ದೆ ಒಂದು ಘಟನೆ ನಡೆದಿದೆ.
ರಷ್ಯಾದ ಬಟರ್ಫ್ಲೈ ಪಾರ್ಕ್ ಪೆಟ್ ಝೂನಲ್ಲಿ ಹಾವೊಂದು ಐದು ವರ್ಷದ ಬಾಲಕಿಗೆ ಕಚ್ಚಿದೆ. 5 ವರ್ಷದ ಹುಡುಗಿ ವಿಕ್ಟೋರಿಯಾ ತನ್ನ ಪೋಷಕರೊಂದಿಗೆ ಪಾರ್ಕ್ ಗೆ ಹೋಗಿದ್ದಳು. ಅಲ್ಲಿ ಅನೇಕ ಪ್ರಾಣಿಗಳನ್ನು ವೀಕ್ಷಿಸಿದ್ದಾರೆ. ಅಲ್ಲಿದ್ದ ಹಾವಿನ ಮೇಲೆ ಫೋಷಕರ ಕಣ್ಣು ಬಿದ್ದಿದೆ. ಹಾವಿನ ಜೊತೆ ಮಗಳ ಫೋಟೋ ತೆಗೆಯಲು ಮುಂದಾಗಿದ್ದಾರೆ. ಬಾಲಕಿ ಕತ್ತಿನ ಮೇಲೆ ಹಾವು ಹಾಕಿ, ಫೋಟೋ ತೆಗೆಯಲು ಮುಂದಾಗಿದ್ದಾರೆ. ಹಾವು, ವಿಕ್ಟೋರಿಯಾಳ ಕುತ್ತಿಗೆಯನ್ನು ಕಚ್ಚಿದೆ. ಹೆದರಿದ ಹುಡುಗಿ ಅಳಲು ಶುರು ಮಾಡಿದ್ದಾಳೆ. ತಕ್ಷಣ ಪೊಲೀಸರು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೃಷ್ಟಕ್ಕೆ ಆ ಹಾವು ವಿಷಕಾರಿಯಾಗಿರಲಿಲ್ಲ. ಮನುಷ್ಯನ ಮೇಲೆ ಪೂರ್ವ ಆಫ್ರಿಕಾ ಜಾತಿಯ ಈ ಹಾವು ದಾಳಿ ನಡೆಸುವುದಿಲ್ಲವಂತೆ. ಅದಕ್ಕೆ ತೊಂದರೆ ಕೊಟ್ಟಿದ್ದರಿಂದ ಅದು ಕಚ್ಚಿದೆ. ವಾಸನೆಯಿಂದ ಮಗುವನ್ನು ತನ್ನ ಆಹಾರವೆಂದುಕೊಂಡು ಅದು ಕಚ್ಚಿದೆ ಎನ್ನಲಾಗ್ತಿದೆ.