ಕ್ಯಾಮರಾಗಳು ಅಂದ ತಕ್ಷಣ ನಿಮಗೆ ಒಂದು ಆಕೃತಿ ಕಣ್ಮುಂದೆ ಬಂದು ಬಿಡುತ್ತದೆ. ನೀವು ಅಬ್ಬಬ್ಬಾ ಅಂದರೆ ಎಷ್ಟು ಪುಟ್ಟ ಕ್ಯಾಮರಾವನ್ನು ನೋಡಿದ್ದೀರಾ..? ಎಂದು ಕೇಳಿದ್ರೆ ಅನೇಕರು ಅನೇಕ ರೀತಿಯ ಉತ್ತರಗಳನ್ನು ನೀಡುತ್ತಾರೆ. ಆದರೆ ಯಾರಾದರೂ ಉಪ್ಪಿನ ಕಣದ ಗಾತ್ರದ ಕ್ಯಾಮರವಾನ್ನು ನೋಡಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇಬೇಕು.
ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅನ್ವೇಷಣೆಯಲ್ಲಿ ಇಂತಹದ್ದೊಂದು ಮೈಕ್ರೋ ಕ್ಯಾಮರಾ ಜನ್ಮ ತಾಳಿದೆ.
ಇದು ಸಾಸಿವೆಗಿಂತಲೂ ಸಣ್ಣ ಅಂದರೆ ಕೇವಲ ಒಂದು ಉಪ್ಪಿನ ಕಣದ ಗಾತ್ರವನ್ನು ಹೊಂದಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಪುಟ್ಟ ಕ್ಯಾಮರಾವು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ತನ್ನ ಕಾರ್ಯಕ್ಷಮತೆಯಲ್ಲಿ ಯಾವುದೇ ದೊಡ್ಡ ಕ್ಯಾಮರಾಗಳಿಗಿಂತ ಕಡಿಮೆ ಇಲ್ಲ. ಎಷ್ಟೇ ದೂರದ ವಸ್ತುಗಳ ಫೋಟೋವನ್ನು ಅತ್ಯಂತ ಸ್ಪಷ್ಟವಾಗಿ ಕ್ಲಿಕ್ಕಿಸುವ ಸಾಮರ್ಥ್ಯ ಈ ಕ್ಯಾಮರಾಗಿದೆ.
ಮಾರುಕಟ್ಟೆಯಲ್ಲಿ ನಿಮಗೆ ಸಾಕಷ್ಟು ಮೈಕ್ರೋ ಕ್ಯಾಮರಾಗಳು ಸಿಗಬಹುದು. ಆದರೆ ಇದುವರೆಗೆ ಅನ್ವೇಷಣೆ ಮಾಡಲಾದ ಯಾವುದೇ ಕ್ಯಾಮರಾ ಕೂಡ ಇಷ್ಟು ಸ್ಪಷ್ಟವಾದ ಫೋಟೋಗಳನ್ನು ಕ್ಲಿಕ್ಕಿಸೋದಿಲ್ಲವಂತೆ. ವೈದ್ಯಕೀಯ ಲೋಕದ ಉಪಯೋಗಕ್ಕಾಗಿ ಈ ಕ್ಯಾಮರಾದ ಅನ್ವೇಷಣೆ ಮಾಡಲಾಗಿದೆ.