ಸ್ಪಾಗೆಟ್ಟಿಯನ್ನು ಎತ್ತಿಹಿಡಿದಿರುವಂತೆಯೇ ಫ್ರೀಜ಼್ ಆಗಿಬಿಟ್ಟಿರುವ ಫೋರ್ಕ್ ಒಂದರ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಪರೀತ ಚಳಿಯ ಕಾರಣ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿ ತಾಪಮಾನ -34 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಅದ್ಯಾವ ಮಟ್ಟದಲ್ಲಿ ಚಳಿ ಇದೆ ಎಂದು ಈ ಚಿತ್ರ ತೋರುತ್ತಿದೆ.
ಮಂಗಳವಾರ ಹೊರಗಡೆ ಉಪಹಾರ ಸೇವಿಸಲು ಇಲ್ಲಿನ ನಿವಾಸಿಯೊಬ್ಬರು ಮುಂದಾದ ವೇಳೆ ಅವರ ಫೋರ್ಕ್ ಮತ್ತು ಸ್ಪಾಗೆಟ್ಟಿ (ಶ್ಯಾವಿಗೆ) ಫ್ರೀಜ಼್ ಆಗಿಬಿಟ್ಟಿದೆ. ಹೀಗಾಗಲು ಬರೀ 15 ಸೆಕೆಂಡ್‌ಗಳು ಸಾಕಾಗಿವೆ. ಈ ಚಿತ್ರವನ್ನು ಮೌಂಟ್ ವಾಷಿಂಗ್ಟನ್‌ನ ಹವಾಮಾನ ವೀಕ್ಷಣಾ ಕೇಂದ್ರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
“ಇಂದು ಬೆಳಿಗ್ಗೆ 65+ ಮೈಲಿ ವೇಗದಲ್ಲಿ ಗಾಳಿ ಬೀಸುತ್ತಿರುವುದನ್ನು ನಮ್ಮ ವೀಕ್ಷಕರಲ್ಲಿ ಒಬ್ಬರು ಕಂಡುಕೊಂಡಿದ್ದು, ಉಪಹಾರಕ್ಕೆಂದು ಮಿಕ್ಕಿದ್ದ ಸ್ಪಾಗೆಟ್ಟಿಯನ್ನು ಸೇವಿಸಲು ಮುಂದಾದ ವೇಳೆ -30 ಡಿಗ್ರೀ ಫ್ಯಾರೆನ್‌ಹೀಯ್ಟ್ (-34 ಡಿಗ್ರೀ ಸೆಲ್ಸಿಯಸ್) ತಾಪಮಾನವು ಅವರನ್ನು ಒಂದೇ ಒಂದು ತುತ್ತು ಸೇವಿಸದಂತೆ ತಡೆದಿದೆ,” ಎಂದು ಮೌಂಟ್ ವಾಷಿಂಗ್ಟನ್ ವೀಕ್ಷಣಾಲಯ ಬರೆದಿದೆ.