ನಿಯಂತ್ರಣ ತಪ್ಪಿದ ಕಾರೊಂದು ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ನೋಡಲು ನಿಮಗೆ ಅಪಘಾತದಂತೆ ಕಂಡು ಬರಬಹುದು. ಆದರೆ, ಇಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಬದಲಾಗಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರು ಚಾಲಕಿಯ ಜೀವ ಉಳಿಸಿದ್ದಾನೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಚಾಲಕಿಯ ಜೀವವನ್ನು ಉಳಿಸಲು ವ್ಯಕ್ತಿಯೊಬ್ಬ ತನ್ನ ಕಾರನ್ನೇ ತ್ಯಾಗ ಮಾಡಿದ್ದಾನೆ. ಆ ವ್ಯಕ್ತಿಯು ನೆದರ್‌ಲ್ಯಾಂಡ್‌ನ ಹೆದ್ದಾರಿಯಲ್ಲಿ ಚಾಲನೆ ಮಾಡುತ್ತಿದ್ದಾಗ ರಸ್ತೆಯ ಬದಿಯಲ್ಲಿ ಹುಲ್ಲಿನ ಕಡೆಗೆ ಚಲಿಸುತ್ತಿರುವ ಕಾರನ್ನು ಗಮನಿಸಿದ್ದಾರೆ. ಹುಲ್ಲುಗಾವಲಿನ ಮೇಲೆ ಸ್ಥಿರವಾದ ವೇಗದಲ್ಲಿ ಕಾರು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿದೆ ಎಂದು ವ್ಯಕ್ತಿಗೆ ಗೊತ್ತಾಗಿದೆ.
ನಿಯಂತ್ರಣವಿಲ್ಲದ ವಾಹನವು ಮುಂದಕ್ಕೆ ಚಲಿಸುತ್ತಿದ್ದಂತೆ ವ್ಯಕ್ತಿಯು ತನ್ನ ಕಾರಿನ ವೇಗವನ್ನು ಕಡಿಮೆ ಮಾಡುತ್ತಾನೆ. ಅಲ್ಲದೆ ಕಾರು ಹುಲ್ಲುಗಾವಲಿನಿಂದ ಮತ್ತೆ ರಸ್ತೆಗೆ ಇಳಿದಾಗ, ಅದರ ಮುಂಭಾಗದಲ್ಲಿ ನೇರವಾಗಿ ನಿಲ್ಲಿಸುತ್ತಾನೆ. ಇದರಿಂದ ಡಿಕ್ಕಿಯಾಗಿ ಕಾರು ನಿಲ್ಲುತ್ತದೆ. ಈ ವೇಳೆ ಕಾರಿನಿಂದ ಇಳಿದು ಓಡಿ ಬಂದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕಾರು ಚಾಲಕಿಯನ್ನು ರಕ್ಷಿಸಿದ್ದಾನೆ.
ತನ್ನ ಕಾರನ್ನು ತ್ಯಾಗ ಮಾಡಿದ ಚಾಲಕನನ್ನು ಹೆನ್ರಿ ಟೆಮ್ಮರ್‌ಮ್ಯಾನ್ಸ್ ಎಂದು ಗುರುತಿಸಲಾಗಿದೆ, ಈತ ಕಾರು ಚಾಲಕಿಗೆ ಆಪದ್ಬಾಂಧವನಾಗಿ ಬಂದಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. 7.4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅಲ್ಲದೆ ಕಾರು ಚಾಲಕಿಯನ್ನು ರಕ್ಷಿಸಿದ ಹೆನ್ರಿ ಟೆಮ್ಮರ್‌ಮ್ಯಾನ್ಸ್ ಸಮಯಪ್ರಜ್ಞೆಗೆ ನೆಟ್ಟಿಗರು ಕೊಂಡಾಡಿದ್ದಾರೆ.
https://twitter.com/buitengebieden_/status/1462475051777806343?ref_src=twsrc%5Etfw%7Ctwcamp%5Etweetembed%7Ctwterm%5E1462475051777806343%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-man-sacrifices-his-car-to-save-unconscious-driver-incident-gets-filmed-on-dashcam-of-another-car%2F834153