ಹಸುವೊಂದು ಕಸಾಯಿಖಾನೆಯಿಂದ ತಪ್ಪಿಸಿಕೊಂಡು ವಾಟರ್ ಪಾರ್ಕ್ ನಲ್ಲಿ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.
ಬ್ರೆಜಿಲ್ ನ ರಿಯೊ ಡಿ ಜನೈರೊದಿಂದ ಪಶ್ಚಿಮಕ್ಕೆ 800 ಕಿಮೀ ದೂರದಲ್ಲಿರುವ ನೋವಾ ಗ್ರಾನಡಾದಲ್ಲಿನ ವಾಟರ್ ಪಾರ್ಕ್ ಗೆ ಹಸುವು ಪ್ರವೇಶಿಸಿದೆ.
317 ಕೆ.ಜಿ. ತೂಕ ಹೊಂದಿರುವ ಹಸುವನ್ನು ಹತ್ಯೆ ಮಾಡಲು ಯೋಜಿಸಲಾಗಿತ್ತು. ಆದರೆ ತನ್ನ ಆವರಣದಿಂದ ಹೊರ ಬಂದ ಹಸುವು ಅಲೆದಾಡುತ್ತಾ ವಾಟರ್ ಪಾರ್ಕ್ ಗೆ ಪ್ರವೇಶಿಸಿದೆ. ಮೆಟ್ಟಿಲುಗಳನ್ನು ಹತ್ತಿದ ದನವು ಸ್ಲೈಡ್ ನ ತುದಿಯನ್ನು ತಲುಪಿದೆ. ನಂತರ ಜಾರುಬಂಡಿಯಲ್ಲಿ ಜಾರುತ್ತಾ ಕೆಳಗಿದ್ದ ಕೊಳದ ಬಳಿಯವರೆಗೂ ಬಂದಿದೆ.
ಈ ಸ್ಲೈಡ್ ಕೇವಲ 200 ಕೆ.ಜಿ ಭಾರ ಹೊರುವ ಸಾಮರ್ಥ್ಯ ಮಾತ್ರ ಇದ್ದರೂ ಕೂಡ ಹಸುವಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ವಾಟರ್ ಪಾರ್ಕ್ ನಲ್ಲಿ ಜನರು ಕೂಡ ಜಾಸ್ತಿ ಇಲ್ಲದೇ ಇದ್ದುದರಿಂದ ದನ ಗಾಬರಿಯಾಗದೆ ಸುಮ್ಮನೆ ನಿಂತಿದೆ.
ಇನ್ನು, ಪಾರ್ಕ್ ಮಾಲೀಕರು ಇದನ್ನು ಸಾಕುಪ್ರಾಣಿಯನ್ನಾಗಿ ಸ್ವೀಕರಿಸಿದ್ದು, ಹಸುವಿಗೆ ಟೊಬೊಗಾ ಎಂದು ಹೆಸರಿಟ್ಟಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಖುಷಿಪಟ್ಟಿದ್ದು, ಕಸಾಯಿಖಾನೆಯಿಂದ ತಪ್ಪಿಸಿಕೊಂಡು ಬಂದಿದ್ದಕ್ಕೆ, ಅಬ್ಬಾ ಬದುಕಿದೆಯಾ ಬಡ ಜೀವವೇ ಎಂಬಂತಹ ಮಾತುಗಳನ್ನು ಹೇಳಿದ್ದಾರೆ.
https://youtu.be/OitimtJ6Bw8