ಮುಂಬೈ: ಮದುವೆಯಲ್ಲಿ ವರನೊಬ್ಬ ಧೋತಿ ಕುರ್ತಾ ಧರಿಸದೆ ಶೇರ್ವಾನಿ ಧರಿಸಿದ್ದಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಮಾರಾಮಾರಿ ನಡೆದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಂಗ್ ಬೇದಾ ಗ್ರಾಮದಲ್ಲಿ ನಡೆದಿದೆ.
ವರನನ್ನು ಧಾರ್ ಜಿಲ್ಲೆಯ ನಿವಾಸಿ ಸುಂದರಲಾಲ್ ಎಂದು ಗುರುತಿಸಲಾಗಿದೆ. ಈತ ಮದುವೆ ವೇಳೆ ಧೋತಿ ಕುರ್ತಾವನ್ನು ಹಾಕಿಕೊಳ್ಳದೇ ಶೇರ್ವಾನಿ ಧರಿಸಿದ್ದರು. ಈ ವೇಳೆ ವಧುವಿನ ಕುಟುಂಬವು ಮದುವೆ ವಿಧಿವಿಧಾನಗಳ ವೇಳೆ ತಮ್ಮ ಬುಡಕಟ್ಟು ಸಂಪ್ರದಾಯದ ಪ್ರಕಾರ ವರ ‘ಧೋತಿ-ಕುರ್ತಾ’ ಧರಿಸಬೇಕು ಮತ್ತು ‘ಶೆರ್ವಾನಿ’ ಅಲ್ಲ ಎಂದು ಹೇಳಿದರು.
ಧೋತಿ ಕುರ್ತಾ ಧರಿಸಲಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಎರಡು ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಧಮನೋದ್ ಪೊಲೀಸ್ ಠಾಣೆ ಪ್ರಭಾರಿ ಸುಶೀಲ್ ಯದುವಂಶಿ ಪೊಲೀಸರು ತಿಳಿಸಿದ್ದಾರೆ.
ಧಾರ್ ನಗರದ ನಿವಾಸಿಯಾಗಿರುವ ವರ ಸುಂದರ್‌ಲಾಲ್ ‘ಶೇರ್ವಾನಿ’ ಧರಿಸಿದ್ದು, ವಧುವಿನ ಸಂಬಂಧಿಕರು ‘ಧೋತಿ-ಕುರ್ತಾ’ದಲ್ಲಿಯೇ ವಿವಾಹ ನಡೆಸುವಂತೆ ಒತ್ತಾಯಿಸಿದರು. ಇದು ಎರಡು ಕಡೆಯವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಹಿಂಸಾತ್ಮಕ ರೂಪ ತಳೆಯಿತು ಎಂದು ಸುಶೀಲ್ ಯದುವಂಶಿ ಹೇಳಿದ್ದಾರೆ.
ಈ ಎರಡು ಕುಟುಂಬಗಳು ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294, 323 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ವರ ಸುಂದರಲಾಲ್, ವಧುವಿನ ಕುಟುಂಬಕ್ಕೂ ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ. ಉಡುಪಿನ ಕುರಿತಾಗಿ ಜಗಳ ಪ್ರಾರಂಭವಾಯಿತು. ಈ ವೇಳೆ ಕೆಲವು ಸಂಬಂಧಿಕರು ಕಲ್ಲುತೂರಾಟ ನಡೆಸಿದರು. ಗದ್ದಲ ಎಬ್ಬಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.