ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿಚಾರಣೆ ನಡೆಸಲಾಗಿದೆ.
ನವೆಂಬರ್ 9 ರವರೆಗೆ ಸಿಬಿಐ ಕಸ್ಟಡಿಯಲ್ಲಿರುವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ನಿನ್ನೆ ರಾತ್ರಿ ಸಿಎಆರ್ ಕ್ವಾರ್ಟರ್ಸ್ ನಲ್ಲಿ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ವಿನಯ ಕುಲಕರ್ಣಿ ವಿರುದ್ಧ ಸಿಬಿಐನಿಂದ ಹೊಸ ಎಫ್ಐಆರ್ ದಾಖಲಿಸಲಾಗಿದೆ. ಹತ್ಯೆ ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿರುವುದು, ಪ್ರಭಾವ ಬಳಸಿ ಪೊಲೀಸರ ಮೇಲೆ ಒತ್ತಡ ಹಾಕಿರುವುದು, ಸ್ಥಳೀಯ ಪೊಲೀಸರನ್ನು ಕಂಟ್ರೋಲ್ ಮಾಡಿರುವ ಆರೋಪ ವಿನಯ ಕುಲಕರ್ಣಿ ಅವರ ಮೇಲಿದೆ. ಪ್ರಕರಣದ ಹಾದಿಯನ್ನು ತಪ್ಪಿಸಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 342 ಸೇರಿದಂತೆ ವಿವಿಧ ಸೆಕ್ಷನ್ ಅಡಿ ಸಿಬಿಐ ಕೇಸ್ ದಾಖಲಿಸಿದೆ.
ಇನ್ನು ಪ್ರಕರಣದಲ್ಲಿ ಸಹಕರಿಸಿದ ಆರೋಪ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೂ ನಡುಕ ಶುರುವಾಗಿದೆ. ತನಿಖಾಧಿಕಾರಿ ಚೆನ್ನಕೇಶವ ಟಿಂಗರಿಕರ್ ಮತ್ತು ಹತ್ಯೆ ನಡೆದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಯಾವ ಕ್ಷಣದಲ್ಲಾದರೂ ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಪ್ರಭಾವಿ ರಾಜಕಾರಣಿಗಳಿಗೂ ಭಯ ಶುರುವಾಗಿದೆ ಎಂದು ಹೇಳಲಾಗಿದೆ.