ತುಮಕೂರು : ತುಮಕೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ದೇವರಿಗೆ ಸೂತಕ ಆಗುತ್ತೆ ಎಂದು ಗ್ರಾಮಸ್ಥರು ಬಾಣಂತಿಯನ್ನು ಊರಿಂದ ಹೊರಗಿಟ್ಟಿದ್ದಾರೆ. ಜನರ ಮೌಢ್ಯ ಕ್ಕೆ ಏನೂ ಅರಿಯದ 1 ತಿಂಗಳ ಕಂದಮ್ಮ ಬಲಿಯಾಗಿದೆ.
ಜಿಲ್ಲೆಯ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ದೇವರಿಗೆ ಸೂತಕ ಆಗುತ್ತದೆ ಎಂದು ಬಾಣಂತಿ ಮಗುವನ್ನು ಊರಿನ ಹೊರಗೆ ಇಡಲಾಗಿತ್ತು, 14 ದಿನಗಳ ಕಾಲ ಅವರು ಊರಿಗೆ ಬಾರದಂತೆ ಸೂಚನೆ ನೀಡಲಾಗಿತ್ತು. ಊರಿನ ಹೊರಗೆ ಹಾಳೆಯ ಗುಡಿಸಲಿನಲ್ಲಿ ಬಾಣಂತಿ-ಮಗು ವಾಸವಾಗಿದ್ದರು. ಆದರೆ ವಿಪರೀತ ತಂಡಿ-ಶೀತದಿಂದ ಮಗುಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ವಸಂತ ಎಂಬ ಈ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಆದರೆ ದುರಾದೃಷ್ಟ ಆಸ್ಪತ್ರೆಯಲ್ಲೇ ಗಂಡು ಮಗು ಮೃತಪಟ್ಟಿತ್ತು, ಹೆಣ್ಣು ಮಗು ಆರೋಗ್ಯವಾಗಿತ್ತು. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಆಕೆಯನ್ನು ಊರಿನ ಹೊರಗಡೆ ಇರುವ ಗುಡಿಸಲಿನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತು.ಆದರೆ ಇದೀಗ ಗ್ರಾಮದ ಜನರ ಮೌಢ್ಯಕ್ಕೆ ಮತ್ತೋರ್ವ ಕಂದಮ್ಮನನ್ನು ಕೂಡ ಮಹಿಳೆ ಕಳೆದುಕೊಂಡಿದ್ದಾಳೆ.