ಪಶ್ಚಿಮ ಬಂಗಾಳದ ಬೀರ್‌ಭುಮ್ ಜಿಲ್ಲೆಯ ಪರ್ಕಾಂಡಿ ಬ್ಲಾಕ್‌ನ ಸ್ಥಳೀಯರಿಗೆ ಚಿನ್ನದಂತೆ ಕಾಣುವ ಧಾತುಗಳು ಸಿಕ್ಕಿವೆ ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಊರಿನ ಜನರೆಲ್ಲಾ ಇಲ್ಲಿನ ಬನ್ಸೋಲಿ ನದಿಯತ್ತ ದೌಡಾಯಿಸಿದ್ದಾರೆ.
ಕಳೆದ ವಾರ ಪರ್ಕಾಂಡಿಯ ಮೊದಲ ಬ್ಲಾಕ್‌ನ ಮುರಾರಿ ಘಾಟ್ ಬಳಿ ಬನ್ಸೋಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕೆಲವರಿಗೆ ಚಿನ್ನದ ಸಣ್ಣ ಸಣ್ಣ ಚೂರುಗಳು ಕೈಗೆ ಸಿಕ್ಕಿವೆ. ಅಂದಿನಿಂದಲೂ ಊರಿನ ಜನರು ಪ್ರತಿನಿತ್ಯ ಚಿನ್ನ ಸಿಗುವ ಆಶಯದಲ್ಲಿ ನದಿಯತ್ತ ಜಮಾಯಿಸುತ್ತಿದ್ದಾರೆ.
“ನದಿ ದಂಡೆಯಲ್ಲಿ ಸ್ವಲ್ಪವೇ ಸ್ವಲ್ಪ ಮಣ್ಣನ್ನು ಅಗೆದ ಸಂದರ್ಭ ಚಿನ್ನ ಪತ್ತೆಯಾಗಿದೆ. ಆದರೆ ಈ ಚಿನ್ನ ಅತ್ಯಲ್ಪದ್ದು. ಹಳೆಯ ಪೈಸೆ ನಾಣ್ಯದಂತೆ ಕಾಣುವ ಇದಲ್ಲಿ ಆ ಕಾಲದ ಗುರುತುಗಳನ್ನು ನೋಡಬಹುದಾಗಿದೆ,” ಎಂದು ಆಜ್‌ತಕ್‌ಗೆ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಚಿನ್ನದ ನಾಣ್ಯಗಳ ರೂಪದಲ್ಲಿ ಚಿನ್ನ ಸಿಕ್ಕಿದ್ದು, ಅವೆಲ್ಲಾ ಬಹಳ ಚಿಕ್ಕ ಗಾತ್ರದಲ್ಲಿವೆ. ಈ ನಾಣ್ಯಗಳು ಹಿಂದೂ ರಾಜರ ಕಾಲಕ್ಕೆ ಸೇರಿದವು ಎಂದು ಗ್ರಾಮಸ್ಥರು ನಂಬಿದ್ದಾರೆ. ಭಾರೀ ಚಿಕ್ಕ ಗಾತ್ರದ್ದಾದರೂ ಸಹ ಅವುಗಳು ಚಿನ್ನದಿಂದ ಮಾಡಿದಂಥವು ಎಂಬ ಕಾರಣಕ್ಕೆ ನಾಣ್ಯಗಳ ಶೋಧಕ್ಕೆ ಗ್ರಾಮಸ್ಥರು ಭಾರೀ ಶ್ರಮ ಹಾಕುತ್ತಿದ್ದಾರೆ.
ರಾಮ್ಪುರ ಹಾತ್‌ನ ಉಪ ವಿಭಾಗೀಯ ಕಮಿಷನರ್ ಈ ಘಟನೆ ಕುರಿತು ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಿದ್ದಾರೆ.