ಬೆಂಗಳೂರು: ದಾಖಲೆ ರಹಿತ ಜನವಸತಿಗಳನ್ನು ಗ್ರಾಮವಾಗಿ ಪರಿವರ್ತಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಖಾಸಗಿ ಜಮೀನಿನ ವಾಸಿಗಳಿಗೂ ಹಕ್ಕು ಪತ್ರ ನೀಡಲಾಗುವುದು.
ಖಾಸಗಿ ಜಮೀನುಗಳಲ್ಲಿ ನೆಲೆಸಿದ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ಅನೇಕ ವರ್ಷಗಳಿಂದ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟ ಜನವಸತಿಗಳು ದಾಖಲೆ ರಹಿತವಾಗಿದ್ದು, ಸಮಾಜದ ಮುಖ್ಯ ವಾಹಿನಿಗೆ ಬರದೆ ಉಳಿದುಕೊಂಡಿವೆ. ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರದಿಂದ ತೀರ್ಮಾನಿಸಲಾಗಿದೆ.
ಖಾಸಗಿ ಜಮೀನುಗಳಲ್ಲಿ ಜನವಸತಿಗಳಿದ್ದಲ್ಲಿ ಅಂತಹ ಸರ್ವೇ ನಂಬರ್ ಮತ್ತು ವಿಸ್ತೀರ್ಣ ಗುರುತಿಸಿ ಖಾಸಗಿ ಜಮೀನುಗಳಲ್ಲಿ ನೆಲೆಸಿದ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗ, ಬಡಾವಣೆ, ಉಪ ಗ್ರಾಮ ಆಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಂತೆ ಅರ್ಜಿ ಸೂಚನೆ ಹೊರಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಧಿಸೂಚನೆಗೆ ಸಾರ್ವಜನಿಕರ ಸಲಹೆ ಆಕ್ಷೆಪಣೆಗಳನ್ನು ಆಹ್ವಾನಿಸಬೇಕು. ದಾಖಲೆ ರಹಿತ ಜನವಸತಿ ನೆಲೆಸಿದ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2 -ಇ ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂ ಮಾಲೀಕರೇ ಸ್ವಂತ ಮನೆ ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2 -ಇ ಅಧಿಸೂಚನೆಯಲ್ಲಿ ತರಬಾರದು. ಗ್ರಾಮ ಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು ಎಂದು ಹೇಳಲಾಗಿದೆ.