ಬೆಂಗಳೂರು: ಕಂದಾಯ ಇಲಾಖೆಯಿಂದ ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಯ ಕಡೆ ಅಧಿಕಾರಿಗಳ ನಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಿಂದ ಹಿಡಿದು ಗ್ರಾಮಲೆಕ್ಕಿಗರವರೆಗೆ ಎಲ್ಲ ಅಧಿಕಾರಿಗಳು ಪ್ರತಿ ತಿಂಗಳು ನಿಗದಿತ ದಿನದಂದು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮತ್ತು ಅಗತ್ಯತೆಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು. ಈ ಮೂಲಕ ರಾಜ್ಯದ ಗ್ರಾಮಗಳು ತ್ವರಿತಗತಿಯಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕ್ರಮಕೈಗೊಳ್ಳಲಾಗಿದೆ.
ಪಹಣಿ ಲೋಪದೋಷ, ಪಿಂಚಣಿ ಸೌಲಭ್ಯ, ಸ್ಮಶಾನ ಲಭ್ಯತೆ, ಆಶ್ರಯ ಯೋಜನೆ, ವಸತಿ ನಿಲಯ, ಬಿಪಿಎಲ್ ಕಾರ್ಡ್, ಸರ್ಕಾರಿ ಜಮೀನು ಒತ್ತುವರಿ ತೆರವು, ಸಸಿ ನೆಡುವುದು, ಮತದಾರರ ಪಟ್ಟಿ ಪರಿಷ್ಕರಣೆ, ಪೌತಿ ಖಾತೆ ಬದಲಾವಣೆ, ಹದ್ದು ಬಸ್ತು, ಪರಿಹಾರ ಪರಿಶೀಲನೆ, ಶಾಲೆಬಿಟ್ಟ ಮಕ್ಕಳನ್ನು ಗುರುತಿಸುವುದು ಹೀಗೆ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಅಹವಾಲು ಸಲ್ಲಿಸಬಹುದಾಗಿದೆ.
ನಿರ್ದಿಷ್ಟ ಗ್ರಾಮಗಳಿಗೆ ಭೇಟಿ ನೀಡುವ ವಾರ ಮೊದಲು ಗ್ರಾಮಸ್ಥರಿಗೆ ಮಾಹಿತಿ ಒದಗಿಸಬೇಕು. ರಾಜ್ಯದ ಪ್ರತಿ ಗ್ರಾಮವು ಸರ್ಕಾರದ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಗ್ರಾಮಗಳನ್ನು ಸಂಪೂರ್ಣ ಸ್ವಾವಲಂಬಿ ಹಾಗೂ ಮಾದರಿ ಗ್ರಾಮವನ್ನಾಗಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.