ಮಾವನ ಮನೆಯಲ್ಲಿ ಆಸ್ತಿ ಹಾಗೂ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವ ಅಳಿಯಂದಿರು ಸಿಗೋದು ತುಂಬಾನೇ ಕಮ್ಮಿ. ಅಂತದ್ರಲ್ಲಿ ಈ ಗ್ರಾಮದಲ್ಲಿ ಅಳಿಯಂದಿರಿಗೆ ಭೂಮಿ ಹಾಗೂ ಮನೆಗಳನ್ನು ನೀಡುವುದು ತಲ ತಲಾಂತರದ ಸಂಪ್ರದಾಯವಾಗಿದ್ದು, ಇದೇ ಕಾರಣಕ್ಕೆ ಈ ಗ್ರಾಮದ ಹುಡುಗಿಯರನ್ನು ಮದುವೆಯಾಗೋಕೆ ಅಕ್ಕಪಕ್ಕದ ಗ್ರಾಮದ ಹುಡುಗರು ನಾ ಮುಂದೆ ತಾ ಮುಂದೆ ಅಂತಾ ಬರುತ್ತಾರಂತೆ.
ಬಹಳ ವರ್ಷಗಳ ಹಿಂದೆ ಅತ್ಯಂತ ಬಡತನದಲ್ಲಿದ್ದ ಅಳಿಯನ ಕಷ್ಟವನ್ನು ನೋಡಲಾಗದೇ ಈ ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿಯೇ ಅಳಿಯನಿಗೆ ಇರಲು ಜಾಗ ನೀಡಿದ ಬಳಿಕ ಈ ಸಂಪ್ರದಾಯ ಶುರುವಾಯ್ತು ಎನ್ನಲಾಗಿದೆ. ಅಲ್ಲದೇ ಈ ಸಂಪ್ರದಾಯ ಕಳೆದ ಮೂರು ತಲೆಮಾರುಗಳಿಂದ ಮುಂದುವರಿದುಕೊಂಡು ಬಂದಿದೆ.
ಇದೇ ಕಾರಣಕ್ಕೆ ಈ ಗ್ರಾಮಕ್ಕೆ ಅಳಿಯಂದಿರ ಗ್ರಾಮ ಎಂಬ ಬಿರುದೇ ಬಂದಿದೆ. ಉತ್ತರ ಪ್ರದೇಶದ ದಾಮಾದನ್ ಪೂರ್ವದಲ್ಲಿರುವ ಈ ಗ್ರಾಮದಲ್ಲಿ ಸದ್ಯ 500ಕ್ಕೂ ಅಧಿಕ ಜನಸಂಖ್ಯೆಯಿದೆ. 250ಕ್ಕೂ ಅಧಿಕ ಮತದಾರರಿದ್ದಾರೆ. ಇಲ್ಲಿನ ಬಹುತೇಕ ನಿವಾಸಿಗಳು ಅಳಿಯಂದಿರೇ ಆಗಿದ್ದು ಈ ಗ್ರಾಮದ ಯುವತಿಯರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದಾರೆ.
ಅಕ್ಬರ್ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. ಆದರೆ 2 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಇಲ್ಲಿನ ಪ್ರಾಥಮಿಕ ಸರ್ಕಾರಿ ಶಾಲೆಗೆ ದಾಮದನ್ ಪೂರ್ವ ಎಂದು ನಾಮಕರಣ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ದಾಖಲೆಗಳಲ್ಲಿ ಈಗ ಹೊಸ ಊರಿನ ಹೆಸರನ್ನೇ ಬರೆಯಲಾಗ್ತಿದೆ.
ಗ್ರಾಮದ ಹಿರಿಯರು ಹೇಳೋ ಪ್ರಕಾರ, ಕಳೆದ ಮೂರು ತಲೆಮಾರುಗಳಿಂದ ಈ ಗ್ರಾಮದ ಹೆಣ್ಣು ಮಕ್ಕಳು ತಮ್ಮ ಗಂಡನ ಜೊತೆಯಲ್ಲಿ ತವರಲ್ಲೇ ವಾಸವಿದ್ದಾರೆ. 1970ರ ದಶಕದಿಂದ ಈ ಸಂಪ್ರದಾಯ ಆರಂಭವಾಯ್ತು ಅಂತಾ ಗ್ರಾಮದ ಹಿರಿಯ ರಾಮ್ ಪ್ರಸಾದ್ ಮಾಹಿತಿ ನೀಡಿದ್ದಾರೆ.