
ಬೆಂಗಳೂರು: ವೇತನ ಹೆಚ್ಚಳ, ಮೂಲ ಸೌಕರ್ಯ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ರಾಜ್ಯವ್ಯಾಪಿ ಮುಷ್ಕರ ಮುಂದುವರೆದಿದ್ದು, ಇದರಿಂದಾಗಿ ವಿದ್ಯಾರ್ಥಿಗಳು, ರೈತರು ವೃದ್ಧರ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗದೇ ತೊಂದರೆಯಾಗಿದೆ.
ರಾಜ್ಯವ್ಯಾಪಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಅವರ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗದೆ ತೊಂದರೆ ಉಂಟಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಮೊಬೈಲ್ ಆ್ಯಪ್, ವೆಬ್ಸೈಟ್ ಸೇರಿ 21 ಸಾಫ್ಟ್ವೇರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸಿ ವೃಂದದ ನೌಕರರ 10 ಪಟ್ಟು ಕೆಲಸದ ಜವಾಬ್ದಾರಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗೆ ಪರಿಗಣಿಸಿ ಅವರಿಗೆ ನೀಡುವ ವೇತನ ಶ್ರೇಣಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಸುಸಜ್ಜಿತ ಕಚೇರಿ, ಪ್ರಿಂಟರ್, ಸ್ಕ್ಯಾನರ್ ನೀಡಬೇಕು. ಮೊಬೈಲ್ ತಂತ್ರಾಂಶದಲ್ಲಿನ ಲೋಪದಿಂದ ಅಮಾನತು ಆಗಿರುವ ಆದೇಶ ಹಿಂಪಡೆಯಬೇಕು. ಅಂತರ ಜಿಲ್ಲಾ ವರ್ಗಾವಣೆ ಮರು ಸ್ಥಾಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ಕೈಗೊಂಡಿದ್ದಾರೆ.
ಇದರಿಂದಾಗಿ ಸಾರ್ವಜನಿಕರ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿ ಪರದಾಟ ನಡೆಸುವಂತಾಗಿದೆ. ಜಾತಿ, ಆದಾಯ ಪ್ರಮಾಣ ಪತ್ರ, ಗೇಣಿ ರಹಿತ ಪ್ರಮಾಣ ಪತ್ರ, ಸ್ಥಳ ದೃಢೀಕರಣ, ಜನನ -ಮರಣ ಪ್ರಮಾಣ ಪತ್ರ ಸೇರಿ ಹಲವು ಪ್ರಮಾಣ ಪತ್ರಗಳನ್ನು ಪಡೆಯಲು ಗ್ರಾಮ ಆಡಳಿತ ಅಧಿಕಾರಿಗಳು ಅಗತ್ಯವಿದ್ದು, ಇವರ ಸಹಿ ಇಲ್ಲದೆ ತಹಶೀಲ್ದಾರಗಳು ಯಾವುದೇ ಪ್ರಮಾಣ ಪತ್ರ ವಿತರಿಸಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.