ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಲಾ ಅವರು ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಸ್ವಸ್ಥರಾಗಿದ್ದ ಅವರಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಆರೋಗ್ಯ ಸಮಸ್ಯೆ ಇದ್ದರೂ ತಹಶೀಲ್ದಾರರು ದೂರದ ಊರಿನಲ್ಲಿ ಕೆಲಸಕ್ಕೆ ನಿಯೋಜಿಸಿದ್ದಾರೆ. ಬದಲಾವಣೆ ಮಾಡಿಕೊಡಲು ಒಪ್ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ವಿಮಲಾ ಆರೋಪಿಸಿದ್ದಾರೆ. ತ್ಯಾಗರ್ತಿ ಮೂಲದ ವಿಮಲಾ ಕಳೆದ ಮೂರು -ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಮರತ್ತೂರು ಗ್ರಾಮ ಲೆಕ್ಕಾಧಿಕಾರಿಯಾಗಿಯೂ ಕೆಲಸ ನಿರ್ವಹಿಸುವಂತೆ ತಹಶೀಲ್ದಾರ್ ಸೂಚಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆಯಿಂದ ರಜೆ ಹಾಕಿದ್ದ ಬಳಿಕ ಅವರನ್ನು 15 ದಿನಗಳ ಕಾಲ ಬರೂರು ವೃತ್ತಕ್ಕೆ ವರ್ಗಾವಣೆ ಮಾಡಲಾಗಿತ್ತು.
ಆರೋಗ್ಯ ಸುಧಾರಿಸಿದ ನಂತರ ಮೊದಲಿನ ಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ತಹಶೀಲ್ದಾರರು ಸೂಚಿಸಿದ್ದರು. ಆರೋಗ್ಯ ಸಮಸ್ಯೆಯ ಕಾರಣ ಮನೆಗೆ ಹತ್ತಿರವಿರುವ ಬರೂರು ವೃತ್ತಕ್ಕೆ ವರ್ಗಾಯಿಸುವಂತೆ ವಿಮಲಾ ವಿನಂತಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಅರೆಹದ ವೃತ್ತದ ಜೊತೆಯಲ್ಲಿ ಮರತ್ತೂರು ವೃತ್ತದಲ್ಲಿ ಕಾರ್ಯ ನಿರ್ವಹಿಸುವಂತೆ ನಿರಂತರ ಒತ್ತಡ ಹೇರುತ್ತಿದ್ದಾರೆ. ರಜೆ ನೀಡಲು ಮನವಿ ಮಾಡಿದ್ದರೂ ಉಪ ತಹಶೀಲ್ದಾರ್ ಮೂಲಕ ನೋಟಿಸ್ ಕೊಡಿಸಿದ್ದು, ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಮುಂದಾಗಿರುವೆ ಎಂದು ವಿಮಲಾ ಪತ್ರ ಬರೆದಿದ್ದಾರೆ.