ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಂತರ ಅನೇಕ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾಲೋಚನೆ ನಡೆಸಿದ್ದಾರೆ.
ಇವರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಜೆ.ಪಿ. ನಡ್ಡಾ ಅವರೊಂದಿಗೆ ಸುಮಾರು 20 ನಿಮಿಷ ಕಾಲ ವಿಜಯೇಂದ್ರ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೆಲವು ಸಚಿವರು ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿರುವುದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿಜಯೇಂದ್ರ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜೆ.ಪಿ. ನಡ್ಡಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಜೆ.ಪಿ. ನಡ್ಡಾ ಭೇಟಿ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ ವಿಜಯೇಂದ್ರ, ಕೊರೋನಾ ಸಂಕಷ್ಟದ ಹೊತ್ತಲ್ಲಿ ಜನರಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ನಡ್ಡಾ ಅವರು ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಇದರಿಂದ ತಮ್ಮಲ್ಲಿ ಇನ್ನಷ್ಟು ಉತ್ಸಾಹ, ಆತ್ಮವಿಶ್ವಾಸ ಹೆಚ್ಚಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನು ರಾಜ್ಯದಲ್ಲೀಗ ನಾಯಕತ್ವ ಬದಲಾವಣೆ ಚರ್ಚೆ ಜೊತೆಗೆ ಸಂಪುಟ ಪುನಾರಚನೆ ಮತ್ತು ಪಕ್ಷದ ಕೆಲವು ಪದಾಧಿಕಾರಿಗಳ ಬದಲಾವಣೆ ಬಗ್ಗೆಯೂ ಚರ್ಚೆಯಾಗ್ತಿದೆ. ಇದೇ ವೇಳೆ ವಿಜಯೇಂದ್ರ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ.