ಬೆಂಗಳೂರು: ಮೊದಲು ನಿಮ್ಮ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿಕೊಂಡು ಬನ್ನಿ ಎಂದು ಬಹಿರಂಗ ಚರ್ಚೆಗೆ ಕರೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಜಯೇಂದ್ರ ಅವರೇ, ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ತಾವೇ ಬಹಿರಂಗ ಚರ್ಚೆಗೆ ಸಿದ್ಧ ಎಂದು ನೀವು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ ಎಂದು ಹೇಳಿದ್ದಾರೆ.
ನಿಮ್ಮ ಪೂಜ್ಯ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್ ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜೊತೆ ಚರ್ಚೆ ಮಾಡಿ ಮುಗಿಸಿ ಬನ್ನಿ.
ನೀವು ಕಮಿಷನ್ ಹೊಡೆಯುವುದರಲ್ಲಷ್ಟೇ ಪರಿಣತರು ಎಂದು ನಿಮ್ಮದೇ ಪಕ್ಷದ ನಾಯಕರಾದ ಯತ್ನಾಳ್, ಜಾರಕಿಹೊಳಿ, ಹೆಚ್.ವಿಶ್ವನಾಥ್ ಅವರು ಹೇಳುತ್ತಲೇ ಇದ್ದಾರೆ. ಇಲ್ಲಿಯವರೆಗೆ ಅವರ ಆರೋಪಗಳಿಗೆ ನೀವು ಪ್ರತಿಕ್ರಿಯೆ ನೀಡದಿರುವುದು ಮತ್ತು ಇಂತಹ ಆರೋಪ ಮಾಡುತ್ತಿರುವವರ ವಿರುದ್ಧ ನಿಮ್ಮ ಪಕ್ಷದ ಹೈಕಮಾಂಡ್ ಕೂಡಾ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಆರೋಪಗಳನ್ನು ನೀವು ಒಪ್ಪಿಕೊಂಡಂತೆ ಕಾಣಿಸುತ್ತಿದೆ, ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ನಿಮ್ಮ ಪದಚ್ಯುತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಡಿಸೆಂಬರ್ ತಿಂಗಳ ಗಡುವು ನಿಜವಾಗುತ್ತಿರುವಂತೆ ಕಾಣುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಚಿಂತಿಸುವ ಬದಲಿಗೆ ಮೊದಲು ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಯೋಚನೆ ಮಾಡಿ.
ನೀವಿನ್ನೂ ಆಡಳಿತಕ್ಕೆ ಹೊಸಬರು, ತೆರಿಗೆ – ಅನುದಾನ – ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮದೇ ಪಕ್ಷದ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂ.ಮಾತ್ರ ಎಂದು ತಿಳಿಸಿದ್ದಾರೆ.
ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ 4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು 45,000 ಕೋಟಿ ರೂ. ಮಾತ್ರ. ಕರ್ನಾಟಕದ ಜನತೆ, ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. 7 ಕೋಟಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಕತ್ ನಿಮಗಾಗಲಿ ನಿಮ್ಮ ಹದಿನೇಳು ಎಂಪಿಗಳಿಗಾಗಲಿ ಎಲ್ಲಿದೆ?
ನಮ್ಮ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನಿಮ್ಮದೇ ಶಾಸಕರು ಹೇಗೆ ದುರ್ಯೋಧನ – ದುಶ್ಯಾಸನರ ರೀತಿಯಲ್ಲಿ ನಡೆದುಕೊಂಡಿದ್ದರು ಎನ್ನುವ ಇತಿಹಾಸವನ್ನು ನಾನು ಕೆದಕಲು ಹೋಗುವುದಿಲ್ಲ. ಆದರೆ ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ಪೂಜ್ಯ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ?
‘‘ಬೇಟಿ ಬಚಾವೋ ಬೇಟಿ ಪಡಾವೋ’’ ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆಗೆ ಬದ್ಧರಾಗಿದ್ದರೆ ಪೋಕ್ಸೋ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಹೇಳಿದ್ದಾರೆ.
ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ. ಅದನ್ನು ಮುಂದಿನ ಜನ್ಮದಲ್ಲಿ ಗಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೆ. ಸಿಬಿಐ ಮತ್ತು ಇಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಪೀಕೇಷನ್, ಅಕ್ರಮ ಗಣಿಗಾರಿಕೆ, ಮನಿ ಲಾಂಡ್ರಿಂಗ್ ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್ ಪಿನ್ ಆಗಿರುವ ನಿಮ್ಮ ಜಾಗ ಎಲ್ಲಿರಬಹುದು ಎನ್ನುವುದನ್ನು ಒಮ್ಮೆ ಯೋಚಿಸಿ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ದುಸ್ಸಾಹಸ ಮಾಡಬೇಡಿ.
ವಕ್ಪ್ ಆಸ್ತಿ ವಿಚಾರದಲ್ಲಿ ಸುಬಗರ ಸೋಗು ಹಾಕುವುದೇನು ಬೇಡ. ನಿಮ್ಮದೇ ಪಕ್ಷದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್ ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು..!! ಅದಕ್ಕೆ ಸಿದ್ಧರಾಗಿರಿ ಎಂದು ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.