ಬೆಂಗಳೂರು: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟವಾದ ಬಳಿಕ ಇಂದು ಮೊದಲ ಸಭೆ ನಡೆಯಲಿದೆ. ಡಿಸೆಂಬರ್ 27ರಂದು ಬೆಳಿಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಮಧ್ಯಾಹ್ನ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಮುಖರ ಸಭೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದ್ದಾರೆ.
ಸಭೆಯ ನಂತರ ಎಲ್ಲಾ ಪ್ರಮುಖರು ಜಿಲ್ಲೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಎಲ್ಲರ ಅಭಿಪ್ರಾಯ ಪಡೆದು ಪಕ್ಷ ಮುನ್ನಡೆಸುವ ತೀರ್ಮಾನ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರದಾಗಿದ್ದು, ಈ ನಿಟ್ಟಿನಲ್ಲಿ ಡಿಸೆಂಬರ್ 28ರಂದು ರಾಜ್ಯ ಪ್ರಮುಖರ ಸಭೆಯನ್ನು ರಾಜ್ಯಾಧ್ಯಕ್ಷರು ಕರೆದಿದ್ದಾರೆ ಎಂದು ರಾಜೀವ್ ತಿಳಿಸಿದ್ದಾರೆ.
ಎಲ್ಲರ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಹೋರಾಟ, ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ಬಗ್ಗೆ ಸಲಹೆ ಪಡೆದುಕೊಂಡು ಹೋರಾಟ, ಸಂಘಟನೆ ರೂಪರೇಷೆ ಸಿದ್ಧಪಡಿಸಲಾಗುವುದು.